ಇಸ್ಲಾಮಾಬಾದ್​ನ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳು 3,000- ಅವರ ದೇಗುಲ ನಿರ್ಮಾಣಕ್ಕೆ ನೂರು ಅಡ್ಡಿ!

Edit 4 Imran Khan
Published on

ಇಸ್ಲಮಾಬಾದ್​: ಅಲ್ಪಸಂಖ್ಯಾತರಾದ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನದ ಇಮೇಜ್​ಗೆ ಧಕ್ಕೆ ನೀಡಿದೆ. ಇದರಿಂದ ಮೇಲೇಳುವ ಸಲುವಾಗಿ ಇಸ್ಲಾಮಾಬಾದ್​ನಲ್ಲಿ ಹಿಂದುಗಳ ದೇವಸ್ಥಾನ ನಿರ್ಮಿಸುವ ನಿರ್ಧಾರವನ್ನು ಇಮ್ರಾನ್ ಖಾನ್ ಸರ್ಕಾರ ತೆಗೆದುಕೊಂಡಿತ್ತು. ಆದರೆ, ಮುಸ್ಲಿಂ ಧಾರ್ಮಿಕ ಮುಖಂಡರ ವಿರೋಧ ತೀವ್ರವಾದ ಕಾರಣ ಖಾನ್ ಸರ್ಕಾರ ದೇವಸ್ಥಾನ ನಿರ್ಮಾಣದ ನಿರ್ಣಯದಿಂದ ಹಿಂದೆ ಸರಿದಿತ್ತು. ಆದರೆ, ಹೊಸ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಪ್ರಾಯೋಜಿತ ಕೌನ್ಸಿಲ್ ಆಫ್ ಕ್ಲೆರಿಕ್ಸ್ ದೇವಸ್ಥಾನ ನಿರ್ಮಿಸುವುದಕ್ಕೆ ಬುಧವಾರ ಅನುಮತಿ ನೀಡಿದೆ.

ದೇವಸ್ಥಾನ ನಿರ್ಮಾಣಕ್ಕೆ 6 ಲಕ್ಷ ಡಾಲರ್ ಅನುದಾನ ಒದಗಿಸುವುದಾಗಿ ಖಾನ್ ಸರ್ಕಾರ ಭರವಸೆ ನೀಡಿತ್ತು. ಆದರೆ, ಖಾನ್ ಅವರ ನಿರ್ಧಾರವನ್ನು ಮುಸ್ಲಿಂ ಧರ್ಮಗುರುಗಳು ಕೆಲವರು ಧರ್ಮದ್ರೋಹಿ ಕೆಲಸ ಎಂದು ಜರೆದಿದ್ದರು. ಈ ಕಾರಣಕ್ಕೇ ಅವರು ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ಕೌನ್ಸಿಲ್ ಆಫ್ ಕ್ಲೆರಿಕ್ಸ್ ಅನುಮತಿ ನೀಡಿದ ಕಾರಣ, ದೇವಸ್ಥಾನ ನಿರ್ಮಾಣದ ಕಾರ್ಯ ಮುಂದುವರಿಯುವ ಲಕ್ಷಣಗಳಿವೆ. ಆದರೆ, ಅನುದಾನ ಸಿಗುವುದೋ ಇಲ್ಲವೋ ಎಂಬುದು ಇನ್ನೂ ದೃಢಪಟ್ಟಿಲ್ಲ.

ಸಂಸತ್​ ಸದಸ್ಯ ಪ್ರಮುಖ ಹಿಂದೂ ನಾಯಕ ಲಾಲ್​ ಮಲ್ಹಿ ಕೌನ್ಸಿಲ್​ನ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ, ಸಾರ್ವಜನಿಕ ಹಣವನ್ನು ಖಾಸಗಿ ಪ್ರಾರ್ಥನಾ ಮಂದಿರಕ್ಕೆ ವಿನಿಯೋಗಿಸಬಾರದು ಎಂದು ಕೌನ್ಸಿಲ್ ಶಿಫಾರಸು ಮಾಡಿದೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ. ಇಸ್ಲಮಾಬಾದ್​ನಲ್ಲಿರುವ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳ ಸಂಖ್ಯೆ 3,000. ಉಳಿದವರು ಬಹುತೇಕ ಮುಸ್ಲಿಮರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net