

ನವದೆಹಲಿ: ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆ ಅಧಿಕಾರಿಗಳು ಒಂದಿಲ್ಲೊಂದು ನಾಚಿಕೆಗೇಡಿನ ಕೆಲಸ ಮಾಡಿ ಟ್ರೋಲ್ ಆಗುತ್ತಿರುವುದು ಹೊಸ ವಿಚಾರವೇನಲ್ಲ.
ಇದೀಗ ಪಾಕಿಸ್ತಾನದ ಬಾಕ್ಸರ್ ಒಬ್ಬ ಮಾಡಿರುವ ಕೆಲಸ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಈ ಮೂಲಕ ಪಾಕಿಸ್ತಾನದ ಮಾನ ಮೂರುಕಾಸಿಗೆ ಹರಾಜಾಗಿದೆ.
ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಹವ್ಯಾಸಿ ಬಾಕ್ಸರ್ ಝೊಹೈಬ್ ರಶೀದ್ ತನ್ನ ಜೊತೆ ಪಂದ್ಯಾವಳಿಯಲ್ಲಿ ಭಾಗಿಯಾಗಲು ಬಂದಿದ್ದ ಮಹಿಳಾ ಬಾಕ್ಸರ್ ಒಬ್ಬರ ಬ್ಯಾಗ್‌ನಲ್ಲಿ ಇದ್ದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಯೋಜಕರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಪಾಕಿಸ್ತಾನ ರಾಯಭಾರ ಕಚೇರಿ ಮೂಲಕವೇ ದೂರು ದಾಖಲಿಸಿದ್ದಾರೆ
ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟದ ಕಾರ್ಯದರ್ಶಿ ಕರ್ನಲ್ ನಾಸಿರ್ ಅಹಮದ್, ನಮ್ಮ ಕ್ರೀಡಾ ಪಟು ಝೊಹೈಬ್ ರಶೀದ್ ಮಾಡಿರುವ ಕೃತ್ಯದಿಂದ ತಮ್ಮ ಒಕ್ಕೂಟಕ್ಕೆ ಹಾಗೂ ಪಾಕಿಸ್ತಾನ ದೇಶಕ್ಕೆ ತುಂಬಾ ಮುಜುಗರವಾಗಿದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಭಾಗಿಯಾಗಲು ಪಾಕಿಸ್ತಾನದಿಂದ ಐವರು ಸದಸ್ಯರ ತಂಡ ಆಗಮಿಸಿತ್ತು.
ಮಹಿಳಾ ಬಾಕ್ಸರ್ ಲಾರಾ ಇಕ್ರಮ್ ತರಬೇತಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಜೊಹೈಬ್ ರಶೀದ್ ರಿಸೆಪ್ಷನ್‌ನಲ್ಲಿದ್ದ ತನ್ನ ಕೊಠಡಿಯ ಕೀಗಳನ್ನು ತೆಗೆದುಕೊಂಡು ಮಹಿಳೆಯ ಪರ್ಸ್‌ನಲ್ಲಿ ಇಟ್ಟಿದ್ದ ವಿದೇಶಿ ಕರೆನ್ಸಿಯನ್ನು ಕದ್ದಿದ್ದಾನೆ. ಈ ಘಟನೆಯ ನಂತರ ಜೊಹೈಬ್ ಹೋಟೆಲ್‌ನಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಹಣ ಕದ್ದು ತಲೆಮರೆಸಿಕೊಂಡಿರುವ ಝೊಹೈಬ್ ರಶೀದ್, 2023ರಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ. ಪಾಕಿಸ್ತಾನದ ಉದಯೋನ್ಮುಖ ಕ್ರೀಡಾಪಟುವಾಗಿ ಗಮನ ಸೆಳೆದಿದ್ದ ಝೊಹೈಬ್ ರಶೀದ್, ಇಟಲಿಯಲ್ಲಿ ನಡೆಯುತ್ತಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಾವಳಿಯ ತರಬೇತಿ ವೇಳೆ ಪಾಕಿಸ್ತಾನದ ಮಹಿಳಾ ಬಾಕ್ಸರ್ ಲೌರಾ ಇಕ್ರಮ್ ಅವರು ಬಾಕ್ಸಿಂಗ್‌ನಲ್ಲಿ ನಿರತರಾಗಿದ್ದಾಗ ಆರೋಪಿ ಝೊಹೈಬ್ ರಶೀದ್ ಆಕೆಯ ರೂಂ ಕೀ ಕಳ್ಳತನ ಮಾಡಿದ್ದ. ನಂತರ ಆಕೆಯ ಬ್ಯಾಗ್‌ನಲ್ಲಿ ಇದ್ದ ಪರ್ಸ್‌ನಿಂದ ವಿದೇಶಿ ಕರೆನ್ಸಿಗಳನ್ನು ಕಳ್ಳತನ ಮಾಡಿ ಕ್ರೀಡಾಪಟುಗಳು ನೆಲೆಸಿದ್ದ ರೂಂನಿಂದ ಪರಾರಿಯಾಗಿದ್ದ.