

Pakistan: ಪಹಲ್ಗಾಮ್ನಲ್ಲಿ 26 ಅಮಾಯಕರನ್ನು ಗುಂಡಿಟ್ಟು ಭೀಕರವಾಗಿ ಹತ್ಯೆಗೈದ ಉಗ್ರರ ದಾಳಿಗೆ ಪ್ರತೀಕಾರಕ್ಕಾಗಿ ಇದೀಗ ಭಾರತ ಪಾಕಿಸ್ತಾನಕ್ಕೆ ಒಂದರಂತೆ ಮತ್ತೊಂದು ಆಘಾತ ನೀಡುತ್ತಿದೆ. ಉಗ್ರರ ಭೀಕರ ಗುಂಡಿನ ದಾಳಿ ಸಂಭವಿಸಿದ ಮರುದಿನವೇ ಪಾಕ್ ಜೊತೆಗಿನ ಸಂಪರ್ಕಗಳನ್ನು ಕಡಿದುಕೊಂಡ ಭಾರತ, ಸಿಂಧೂ ನೀರು ಹಂಚಿಕೆ ಒಪ್ಪಂದ, ಅಟ್ಟಾರಿ-ವಾಘಾ ಗಡಿ ಬಂದ್, ಪಾಕ್ ಪ್ರಜೆಗಳ ವೀಸಾ ರದ್ದು ಹಾಗೂ ಭಾರತದಲ್ಲಿ ಉಳಿದಿದ್ದ ಪಾಕಿಸ್ತಾನ ಪ್ರಜೆಗಳಿಗೆ ದೇಶದಿಂದ ಗೇಟ್ಪಾಸ್ ಸೇರಿದಂತೆ ಹಲವು ಕಠಿಣ ನಿರ್ಣಯಗಳು ಜಾರಿಗೊಳಿಸಿದೆ. ಈ ಮೂಲಕ ಪಾಕ್ಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಉಗ್ರರ ಅಟ್ಟಹಾಸ ಅಡಗಿಸಲು ಪಣತೊಟ್ಟಿರುವ ಭಾರತ ಸರ್ಕಾರ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಎಲ್ಲಾ ಆಯಾಮಗಳಲ್ಲಿ ತನ್ನ ಪ್ರಯತ್ನ ಮುಂದುವರಿಸಿದೆ. ಸೇನೆಯ ಮೂಲಕ ಪಾಕಿಸ್ತಾನದ ಆರ್ಥಿಕ ಸಂಪನ್ಮೂಲಗಳನ್ನು ಭಾರತ ಗುರಿಯಾಗಿಸಿಕೊಂಡಿದೆ. ಸಿಂಧೂ ಜಲ ಒಪ್ಪಂದವನ್ನು ಈಗಾಗಲೇ ಸ್ಥಗಿತಗೊಳಿಸಿರುವ ಭಾರತ, ಪ್ರಸ್ತುತ ಒಂದೇ ಒಂದು ಹನಿ ನೀರು ಕೂಡ ಡ್ಯಾಮ್ ಗೇಟ್ನಿಂದ ಹೊರಹೋಗದಂತೆ ನೋಡಿಕೊಳ್ಳುತ್ತಿದೆ. ಯುದ್ಧ ಸವಾಲು ಹಾಕುವ ಪಾಕ್ಗೆ ಈಗ ಗಂಟಲು ಒಣಗಲು ಶುರುವಾಗುತ್ತಿದೆ. ಇತ್ತೀಚೆಗೆ, ಬಾಗ್ಲಿಹಾರ್ ಅಣೆಕಟ್ಟಿನಿಂದ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಅಣೆಕಟ್ಟು ಸ್ಪಿಲ್ವೇಯ ಗೇಟ್‌ಗಳನ್ನು ಮುಚ್ಚಲಾಗಿದೆ. ಮತ್ತೊಂದೆಡೆ, ಝೀಲಂ ನದಿಯ ಕಿಶನ್ ಗಂಗಾ ಅಣೆಕಟ್ಟಿನಿಂದಲೂ ನೀರಿನ ಹರಿವನ್ನು ತಡೆಯಲು ಭಾರತ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ.
ಬಾಗ್ಲಿಹಾರ್ ಅಣೆಕಟ್ಟನ್ನು 2008ರಲ್ಲಿ ಚೆನಾಬ್ ನದಿಯ ಮೇಲೆ ನಿರ್ಮಿಸಲಾಯಿತು. ಸಿಂಧೂ ಜಲ ಒಪ್ಪಂದದಡಿಯಲ್ಲಿ ಪಾಕಿಸ್ತಾನ ಅಧಿಕ ಪ್ರಮಾಣದಲ್ಲಿ ನೀರನ್ನು ಪಡೆದ ನದಿಗಳಲ್ಲಿ ಚೆನಾಬ್ ಒಂದಾಗಿದೆ. ಈ ಅಣೆಕಟ್ಟಿನ ಉದ್ದ ಸುಮಾರು 145 ಮೀಟರ್. ಬಾಗ್ಲಿಹಾರ್ ಅಣೆಕಟ್ಟಿನ ಜಲವಿದ್ಯುತ್ ಉತ್ಪಾದನೆಯ ಜೊತೆಗೆ, ಪಂಜಾಬ್ ಪ್ರಾಂತ್ಯ ಮತ್ತು ಇತರ ಪ್ರದೇಶಗಳಲ್ಲಿನ ರೈತರು ಇಲ್ಲಿನ ನೀರನ್ನೇ ತಮ್ಮ ಬೆಳೆಗಳನ್ನು ಬೆಳೆಯಲು ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲಿ, ಇತ್ತೀಚೆಗೆ, ಝೀಲಂ ನದಿಯ ಪ್ರವಾಹವು ಪಾಕ್ ಆಕ್ರಮಿತ ಕಾಶ್ಮೀರದ ಜನರಲ್ಲಿ ಭೀತಿಯನ್ನು ತಂದೊಡ್ಡಿದೆ.
ಕಳೆದ ವಾರ, ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾದ ಹಿನ್ನೆಲೆ ಮುಜಫರಾಬಾದ್ ಬಳಿಯ ಹಟ್ಟಿಯನ್ ಬಾಲಾ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಬೇಕಾಯಿತು. ಝೀಲಂ ನದಿ ಅನಂತನಾಗ್ ಜಿಲ್ಲೆಯ ಮೂಲಕ ಹರಿಯುತ್ತದೆ ಮತ್ತು ಚಕೋತಿಯಲ್ಲಿ ಪಿಒಕೆ ಪ್ರವೇಶಿಸುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ, ಭಯೋತ್ಪಾದಕ ದಾಳಿಗಳನ್ನು ಎದುರಿಸಲು ಭಾರತವು ಜಲ ಶಸ್ತ್ರಾಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂದು ಹೇಳಬಹುದು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತ ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿದಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರ ಜೊತೆಗೆ ಪಾಕ್ನ ಎಲ್ಲಾ ವಸ್ತುಗಳ ಆಮದು ರದ್ದು, ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆಯನ್ನು ಕಡಿತ, ಅಟ್ಟಾರಿ ಗಡಿ ಮುಚ್ಚುವುದು, ಪಾಕಿಸ್ತಾನಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ, ಜಾಲತಾಣಗಳ ಖಾತೆಯನ್ನು ನಿಷೇಧಿಸುವುದು ಮತ್ತು ವ್ಯಾಪಾರ ನಿರ್ಬಂಧಗಳನ್ನು ವಿಧಿಸುವ ಮೂಲಕ ಪಾಕ್ ಮೇಲಿನ ಪ್ರತೀಕಾರವನ್ನು ಮತ್ತಷ್ಟು ತೀವ್ರಗೊಳಿಸಿದೆ,(ಏಜೆನ್ಸೀಸ್).