

Pakistan Stock Market: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ (ಏಪ್ರಿಲ್ 23) ಸಂಜೆ ದೆಹಲಿಯ ಲೋಕ ನಾಯಕ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸುವವರೆಗೆ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಲಾಯಿತು. ಭಾರತದ ಈ ನಿರ್ಧಾರವು ಪಾಕಿಸ್ತಾನದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಅದರ ಸುಳಿವು ಈಗಾಗಲೇ ಸಿಕ್ಕಿದೆ.
ಪಾಕಿಸ್ತಾನ ಜತೆಗಿನ ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವ ನಿರ್ಧಾರ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಷೇರು ತೀವ್ರವಾಗಿ ಕುಸಿದಿದ್ದು, ಶೇ.2ರಷ್ಟು ಇಳಿಕೆ ಕಂಡಿದೆ. ಮಾರುಕಟ್ಟೆ ಆರಂಭವಾದ ತಕ್ಷಣ ಷೇರು ಸೂಚ್ಯಂಕಗಳು ಕುಸಿದಿವೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ಗುಂಡಿನ ದಾಳಿಯ ಬೆನ್ನಲ್ಲೇ ಪಾಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕಟು ನಿರ್ಧಾರಗಳ ಬಿಸಿ ಈಗ ಪಾಕ್ಗೆ ತಟ್ಟಲು ಶುರುವಾಗಿದೆ.
ಗುರುವಾರದ (ಏ.24) ಆರಂಭಿಕ ವಹಿವಾಟಿನಲ್ಲಿ ಪಾಕಿಸ್ತಾನ ಷೇರು ವಿನಿಮಯ ಕೇಂದ್ರ (PSX) ಭಾರಿ ಕುಸಿತವನ್ನು ದಾಖಲಿಸಿದೆ. ಪಾಕಿಸ್ತಾನ KSE-100 ಸೂಚ್ಯಂಕವು ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.2.12ರಷ್ಟು (ಅಂದರೆ 2485.85 ಅಂಕಗಳು) ಕುಸಿದಿದೆ. ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ ತೀವ್ರವಾಗಿದ್ದು, ಇದು ಪಾಕಿಸ್ತಾನಿ ಷೇರು ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಿದೆ. ಇದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.
ಸಿಂಧೂ ಜಲ ಒಪ್ಪಂದ ಸ್ಥಗಿತ, ವಾಘಾ-ಅಟ್ಟಾರಿ ಗಡಿ ಬಂದ್ ಮತ್ತು ಸಾರ್ಕ್ ಅಡಿಯಲ್ಲಿ ಪಾಕಿಸ್ತಾನಿ ನಾಗರಿಕರಿಗೆ ವೀಸಾ ವಿನಾಯಿತಿ ರದ್ದುಗೊಳಿಸುವುದು ಮೋದಿ ಅವರ ಸಭೆಯಲ್ಲಿ ತೆಗೆದುಕೊಂಡ ಕಟು ತೀರ್ಮಾನಗಳು. ಸಿಂಧೂ ನದಿಯ ನೀರು ಪಾಕಿಸ್ತಾನದ ಆರ್ಥಿಕತೆಗೆ ಬಹಳ ಮುಖ್ಯವಾಗಿದ್ದು, ಇದೇ ಈಗ ಪಾಕ್ ಷೇರುಪೇಟೆಯ ಮೇಲೆ ಒತ್ತಡ ಹೆಚ್ಚಿಸಿದೆ. ದೇಶವು ಆ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಗಮನಾರ್ಹ. ಇದಲ್ಲದೆ, ಐಎಂಎಫ್ ಪಾಕಿಸ್ತಾನದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 2.6ಕ್ಕೆ ಇಳಿಸಿದೆ. ಇದರಿಂದಾಗಿ, ಪಾಕ್ ಷೇರು ಮಾರುಕಟ್ಟೆ ನಷ್ಟದಲ್ಲಿ ಅಂತ್ಯಗೊಂಡಿದೆ. ಆದಾಗ್ಯೂ, ಭಾರತೀಯ ಷೇರು ಮಾರುಕಟ್ಟೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ.
ಮತ್ತೊಂದೆಡೆ, ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪ್ರಮುಖ ಪರಿಣಾಮ ಬೀರಿಲ್ಲ. ಆದರೆ, ಗುರುವಾರ ಮಧ್ಯಾಹ್ನ 1.40ರ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.36 (285.31 ಅಂಕಗಳು) ಕುಸಿತ ಕಂಡು 79,831.18 ಅಂಕಗಳಲ್ಲಿ ವಹಿವಾಟು ನಡೆಸಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 50 ಶೇ. 0.33 (80.55 ಅಂಕಗಳು) ಕುಸಿತ ಕಂಡು 24,248.40 ಅಂಕಗಳಲ್ಲಿ ವಹಿವಾಟು ಆರಂಭಿಸಿದೆ. ಇಂದು, ಸೆನ್ಸೆಕ್ಸ್ 58.06 ಅಂಕಗಳ ಕುಸಿತದೊಂದಿಗೆ 80,058.43 ಅಂಕಗಳಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ 50 51.05 ಅಂಕಗಳ ಕುಸಿತದೊಂದಿಗೆ 24,277.90 ಅಂಕಗಳಲ್ಲಿ ವಹಿವಾಟು ನಡೆಸಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).