ಪಾಕ್ ರಾಜಕೀಯದಲ್ಲಿ ಮತ್ತೆ ಸೇನೆ ಸಂಚಲನ

Pak
Published on

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ. ಕಮರ್ ಜಾವೇದ್ ಬಜ್ವಾ ಮತ್ತು ಬೇಹುಗಾರಿಕೆ ಸಂಸ್ಥೆ ಐಎಸ್​ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್, ಪ್ರತಿಪಕ್ಷಗಳ ಕೆಲವು ಪ್ರಮುಖ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸರ್ವಪಕ್ಷ ಸಭೆಯೊಂದಕ್ಕೂ ಮುಂಚೆಯೇ ಆಯ್ದ ವಿಪಕ್ಷ ನೇತಾರರೊಂದಿಗೆ ಸಭೆ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಪ್ರಧಾನಿ ಇಮ್ರಾನ್ ಖಾನ್ ಜತೆಗಿನ ರಾಜಕೀಯ ಭಿನ್ನಾಭಿಪ್ರಾಯ ವಿಚಾರದಲ್ಲಿ ಮಿಲಿಟರಿಯನ್ನು ಎಳೆದು ತರಬೇಡಿ ಎಂದು ಉಭಯ ಉನ್ನತಾಧಿಕಾರಿಗಳು ಈ ಸಭೆಯಲ್ಲಿ ವಿಪಕ್ಷಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ 16ರಂದು ನಡೆದ ಸಭೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯ ಪ್ರತಿಪಕ್ಷ ನಾಯಕ ಶಾಬಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಸಹಿತ ಸುಮಾರು 15 ಪ್ರಮುಖ ರಾಜಕಾರಣಿಗಳು ಇದ್ದರು ಎಂದು ‘ದಿ ಡಾನ್’ ವರದಿ ಮಾಡಿದೆ. ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಸ್ವತಂತ್ರ ಪ್ರಾಂತ್ಯದ ಸ್ಥಾನಮಾನ ಕಲ್ಪಿಸುವುದಕ್ಕೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ವಿಚಾರ ರ್ಚಚಿಸಲು ಸಭೆ ಕರೆಯಲಾಗಿತ್ತು ಎಂದು ಸಭೆಯಲ್ಲಿ ಭಾಗವಹಿಸಿದ್ದ ರೈಲ್ವೆ ಸಚಿವ ಷೇಕ್ ರಷೀದ್ ಹೇಳಿದ್ದಾರೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸ್ಥಾನಮಾನದ ಬದಲಾವಣೆ ಪ್ರಸ್ತಾಪನೆಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ.

ರಾಜಕೀಯದಲ್ಲಿ ಮಿಲಿಟರಿ ಹಸ್ತಕ್ಷೇಪದ ಬಗ್ಗೆ ಪ್ರತಿಪಕ್ಷ ಗಳು ಕಳವಳ ವ್ಯಕ್ತಪಡಿಸಿದವು. ಹೊಣೆಗಾರಿಕೆಯ ನೆಪದಲ್ಲಿ ಪ್ರತಿಪಕ್ಷಗಳ ನಾಯಕರ ಮೇಲೆ ಆರೋಪ ಹೊರಿಸಿ ಶಿಕ್ಷೆಗೆ ಗುರಿಪಡಿಸುವುದನ್ನು ಕೂಡ ಅವರು ಖಂಡಿಸಿದರು ಎಂದು ತಿಳಿದು ಬಂದಿದೆ. ರಹಸ್ಯ ಸಭೆಯ ನಂತರ ನಡೆದ ಅಧಿಕೃತ ಸರ್ವಪಕ್ಷ ಸಭೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್, ಸೇನೆಯನ್ನು ಕಟುವಾಗಿ ಟೀಕಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net