

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತಂದೆಯು ಮಗಳನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಈ ಕುಟುಂಬ ಅಮೆರಿಕದಿಂದ ಪಾಕಿಸ್ತಾನಕ್ಕೆ ಬಂದಿತ್ತು. ಆರೋಪಿಯ ಹೆಸರು ಅನ್ವರ್ ಉಲ್-ಹಕ್, ಬಲೂಚಿಸ್ತಾನದ ಕ್ವೆಟ್ಟಾದಲ್ಲಿನ ರಸ್ತೆಯೊಂದರಲ್ಲಿ ತನ್ನ ಮಗಳನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸ್(Police) ತನಿಖೆಯಲ್ಲಿ ತಿಳಿದು ಬಂದಿದೆ.
ವಿಚಾರಣೆ ವೇಳೆ ಆರೋಪಿಯು ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಯತ್ನಿಸಿದ್ದು, ಅಪರಿಚಿತ ಬಂದೂಕುಧಾರಿ ತನ್ನ ಮಗಳಿಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ತಿಳಿಸಿದ್ದ. ಆದರೆ ಪ್ರಾಥಮಿಕ ತನಿಖೆಯ ನಂತರ ಪೊಲೀಸರು ವಿಚಾರಣೆ ಆರಂಭಿಸಿದಾಗ ಅಮೆರಿಕ ಮೂಲದ ಮಗಳನ್ನು ಕೊಲೆ ಮಾಡಿದ್ದಾಗಿ ಆಕೆಯ ತಂದೆ ಒಪ್ಪಿಕೊಂಡಿದ್ದಾನೆ.
ನಮ್ಮ ತನಿಖೆಯಲ್ಲಿ, ಆಕೆ ಧರಿಸುವ ಬಟ್ಟೆ, ಜೀವನಶೈಲಿ ಮತ್ತು ಜನರನ್ನು ಭೇಟಿ ಮಾಡುವ ಅಭ್ಯಾಸದಿಂದ ತೀವ್ರ ಅಸಮಾಧಾನವಿದೆ ಎಂದು ಆರೋಪಿ ತಿಳಿಸಿರುವುದಾಗಿ ಪೊಲೀಸರ ಹೇಳಿದ್ದಾರೆ. ನಾವು ಮೃತರ ಫೋನ್ ಅನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಮರ್ಯಾದಾ ಹತ್ಯೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿ ತಂದೆ ತನ್ನ ಮಗಳ ಟಿಕ್ಟಾಕ್ ಅಭ್ಯಾಸದ ಬಗ್ಗೆ ತುಂಬಾ ಕೋಪಗೊಂಡಿದ್ದಾನೆ ಮತ್ತು ಇದು ಅವಳ ಕೊಲೆಯ ಹಿಂದಿನ ದೊಡ್ಡ ಕಾರಣ ಎಂದು ಮೂಲಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸುಮಾರು 25 ವರ್ಷಗಳ ಕಾಲ ಅಮೆರಿಕದಲ್ಲಿ ವಾಸಿಸುತ್ತಿದ್ದ ಕುಟುಂಬವು ಇತ್ತೀಚೆಗೆ ಬಲೂಚಿಸ್ತಾನ್ ಪ್ರಾಂತ್ಯಕ್ಕೆ ಮರಳಿದೆ. ತನಿಖೆಯ ಸಮಯದಲ್ಲಿ ಶಂಕಿತನು ಅಮೆರಿಕನ್ ಪೌರತ್ವವನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳಿಗೆ ತಿಳಿದಿದೆ. ಆರೋಪಿಯು ತನ್ನ ಮಗಳು ಅಮೆರಿಕನ್ ಪ್ರಜೆಯಾಗಿದ್ದು, ಅಮೆರಿಕದಲ್ಲಿದ್ದಾಗ ಟಿಕ್ಟಾಕ್ನಲ್ಲಿ ನಿರಂತರವಾಗಿ ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡುತ್ತಿದ್ದಳು. ಅದು ತನ್ನನ್ನು ಅಸಮಾಧಾನಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಪಾಕಿಸ್ತಾನಕ್ಕೆ ಮರಳಿದ ನಂತರವೂ ತನ್ನ 15 ವರ್ಷದ ಮಗಳು ನಿರಂತರವಾಗಿ ವಿಡಿಯೋ ಮಾಡುತ್ತಿದ್ದಾಳೆ ಎಂದು ಆರೋಪಿ ಹೇಳಿದ್ದಾನೆ. ಈ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮೃತರ ಚಿಕ್ಕಪ್ಪನನ್ನು ಬಂಧಿಸಿದ್ದಾರೆ ಮತ್ತು ಆಕೆಯ ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಪಾಕಿಸ್ತಾನದಲ್ಲಿ ಟಿಕ್ಟಾಕ್ ವಿರುದ್ಧ ಮೂಲಭೂತವಾದಿಗಳು ಯಾವಾಗಲೂ ತಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಸುಮಾರು 5.5 ಕೋಟಿ ಜನರು ಟಿಕ್ಟಾಕ್ ಅನ್ನು ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ ಸರ್ಕಾರವು ಹಲವಾರು ಬಾರಿ ಟಿಕ್ಟಾಕ್ ಅನ್ನು ನಿಷೇಧಿಸಿದೆ. ಆದರೆ ಚೀನಾದ ಒತ್ತಡದಿಂದಾಗಿ ಮತ್ತೆ ಮತ್ತೆ ನಿಷೇಧವನ್ನು ತೆಗೆದುಹಾಕಲು ಒತ್ತಾಯಿಸಲಾಯಿತು. ಟಿಕ್ಟಾಕ್ನಲ್ಲಿ ಯೋಗ್ಯವಾದ ವಿಡಿಯೋಗಳನ್ನು ಮಾಡಲು ಪಾಕಿಸ್ತಾನ ಸರ್ಕಾರವು ಹಲವು ಬಾರಿ ಮನವಿ ಮಾಡಿದೆ. ಕೆಲವು ಸಮಯದಿಂದ, ಪಾಕಿಸ್ತಾನದ ಅಧಿಕಾರಿಗಳು ಆಕ್ಷೇಪಣೆಗಳನ್ನು ಎತ್ತುವ ಇಂತಹ ವಿಷಯವನ್ನು ನಿರ್ಬಂಧಿಸುತ್ತಿದ್ದಾರೆ.(ಏಜೆನ್ಸೀಸ್)