ಹಿಂಸೆಯ ಕರಿಛಾಯೆಯಲ್ಲೇ ಮತದಾನಕ್ಕೆ ಸಜ್ಜಾದ ಪಾಕ್

Pak Election
Published on

ಜಗತ್ತಿಗೆ ಭಯೋತ್ಪಾದನೆ ರಫ್ತು ಮಾಡುತ್ತಿರುವ ಪಾಕಿಸ್ತಾನ ಈಗ ಅಂತರಿಕ ಶತ್ರುಗಳಿಂದಲೇ ನಲುಗಿ ಹೋಗಿದೆ. ರಾಷ್ಟ್ರೀಯ ಸಂಸತ್ (ನ್ಯಾಶನಲ್ ಅಸೆಂಬ್ಲಿ) ಚುನಾವಣೆಯ 24 ಗಂಟೆಯ ಮುನ್ನ (ಬುಧವಾರ) ನಡೆದ ಎರಡು ಸ್ಪೋಟಗಳಲ್ಲಿ 25 ಜನರು ಮೃತಪಟ್ಟಿದ್ದಾರೆ. ಈ ಹಿಂಸೆಯ ಛಾಯೆಯಲ್ಲೇ ಮತದಾನಕ್ಕೆ ಸಜ್ಜಾಗಿರುವ ಪಾಕಿಸ್ತಾನದ ಸದ್ಯದ ರಾಜಕೀಯ ಚಿತ್ರಣದ ಮಾಹಿತಿ ಇಲ್ಲಿದೆ.

ಕೊನೆಗೊಳ್ಳಲಿದೆಯೇ ರಾಜಕೀಯ ಅಸ್ಥಿರತೆ? ಆರ್ಥಿಕ ಮತ್ತು ರಾಜಕೀಯ ಸಂಕಷ್ಟಗಳನ್ನು ಎದುರಿಸುತ್ತಿರುವ, ಉಗ್ರದಾಳಿಗಳಿಂದ ತತ್ತರಿಸಿರುವ ಪಾಕಿಸ್ತಾನದ ಜನರು ಮುಂದಿನ ಐದು ವರ್ಷಗಳಿಗೆ ದೇಶದ ನೇತೃತ್ವವನ್ನು ಆಯ್ಕೆ ಮಾಡಲು, ಅಂದರೆ ಹದಿನಾರನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಇಂದು (ಫೆಬ್ರವರಿ 8) ಮತದಾನ ಮಾಡಲಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗ 2023 ಡಿಸೆಂಬರ್ 15ರಂದು ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ನಾಲ್ಕು ಪ್ರಾಂತ್ಯಗಳ 593 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಮತದಾನ ನಡೆಯಲಿದೆ. 12,695 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.

ಪ್ರಧಾನಿ ಶಾಹಬಾಜ್ ಷರೀಫ್ ಅವರ ಶಿಫಾರಸಿನ ಮೇರೆಗೆ ಪಾಕ್ ಅಧ್ಯಕ್ಷರು ರಾಷ್ಟ್ರೀಯ ಸಂಸತ್​ನ್ನು 2023 ಆಗಸ್ಟ್ 10ರಂದು ವಿಸರ್ಜಿಸಿದ್ದರು. ಮತ್ತು 90 ದಿನಗಳ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದರು. ಹಿಂಸೆ, ಆಂತರಿಕ ಕಲಹ ಮುಂತಾದ ಕಾರಣದಿಂದ ಸಂಸತ್ತು ವಿಸರ್ಜನೆಗೊಂಡ ಐದು ತಿಂಗಳ ನಂತರ ಚುನಾವಣೆ ನಡೆಯುತ್ತಿದೆ.

ಹೀಗಿದೆ ಸಂಸದೀಯ ವ್ಯವಸ್ಥೆ

ಪಾಕಿಸ್ತಾನದಲ್ಲಿ ದ್ವಿಸದನದ ಸಂಸದೀಯ ವ್ಯವಸ್ಥೆ ಇದೆ. ನ್ಯಾಶನಲ್ ಅಸೆಂಬ್ಲಿ ಒಟ್ಟು 336 ಸೀಟುಗಳನ್ನು ಹೊಂದಿದೆ. ಈ ಪೈಕಿ 266 ಸ್ಥಾನಗಳಿಗೆ ಜನರು ಮತದಾನ ಮಾಡುತ್ತಾರೆ. ಉಳಿದ ಸ್ಥಾನಗಳ ಪೈಕಿ 60 ಮಹಿಳೆಯರಿಗೆ ಮತ್ತು 10 ಸ್ಥಾನಗಳನ್ನು ಮುಸ್ಲಿಂತೇರರಿಗೆ ಮೀಸಲಿಡಲಾಗಿದೆ.

ಕಣದಲ್ಲಿರುವ ಪ್ರಮುಖ ಪಕ್ಷಗಳು

* ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್​ಎನ್)

* ಬಿಲಾವಲ್ ಭುಟ್ಟೋ ಮತ್ತು ಅಸೀಫ್ ಅಲಿ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ)

* ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಹರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಚಿಹ್ನೆಯನ್ನು ಚುನಾವಣೆ ಆಯೋಗ ರದ್ದು ಮಾಡಿದ್ದು ಇಮ್ರಾನ್ ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಸಮೀಕ್ಷೆಗಳು ಏನು ಹೇಳುತ್ತವೆ?

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿ ಇರುವುದರಿಂದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಪಾಕ್ ಮಾಧ್ಯಮಗಳ ಸಮೀಕ್ಷೆಗಳು ಅಂದಾಜಿಸಿವೆ. ಹೀಗಾಗಿ, 74 ವರ್ಷದ ನವಾಜ್ ಷರೀಫ್ ದಾಖಲೆಯ ನಾಲ್ಕನೇ ಅವಧಿಗೆ ಪ್ರಧಾನಿಯಾಗುವ ಉಮೇದಿನಲ್ಲಿದ್ದಾರೆ. ಮಾಜಿ ಸಚಿವ ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಕ್ಷ ಎರಡನೇ ದೊಡ್ಡ ಪಕ್ಷವಾಗಿ ಹೊಮ್ಮುವ ಸಾಧ್ಯತೆ ಇದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಚಿಹ್ನೆಯಾದ ‘ಕ್ರಿಕೆಟ್ ಬ್ಯಾಟ್’ನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಚುನಾವಣಾ ಆಯೋಗದ ಈ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹೀಗಾಗಿ, ಪಿಟಿಐ ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಪ್ರಮುಖ ಅಂಶಗಳು

ಜನಸಂಖ್ಯೆ: 21.97 ಕೋಟಿ

ಒಟ್ಟು ಸ್ಥಾನಗಳು: 266

ಚುನಾವಣೆ ನಡೆಯುವ ಕ್ಷೇತ್ರಗಳು: 265 (ಅಭ್ಯರ್ಥಿಯ ಕೊಲೆ ಹಿನ್ನೆಲೆಯಲ್ಲಿ ಒಂದು ಕ್ಷೇತ್ರದ ಮತದಾನ ಮುಂದೂಡಲಾಗಿದೆ)

ಮತದಾರರು: 12.85 ಕೋಟಿ (6.9 ಕೋಟಿ ಪುರುಷರು, 5.9 ಕೋಟಿ ಮಹಿಳೆಯರು)

ಮ್ಯಾಜಿಕ್ ಸಂಖ್ಯೆ: 134

ಅಭ್ಯರ್ಥಿಗಳು: 5,121 (4,807 ಪುರುಷರು, 312 ಮಹಿಳೆಯರು, ಇಬ್ಬರು ತೃತಿಯಲಿಂಗಿಗಳು)

ಪಕ್ಷಗಳು: 167

ಮತಗಟ್ಟೆಗಳ ಸಂಖ್ಯೆ: 90,582

ಅತಿಸೂಕ್ಷ್ಮ ಮತಗಟ್ಟೆಗಳು: 29,985

ಭದ್ರತಾ ಸಿಬ್ಬಂದಿ: 6.5 ಲಕ್ಷಕ್ಕೂ ಅಧಿಕ

ಮತದಾನ ಸಮಯ: ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ

ಫಲಿತಾಂಶ: ತಡರಾತ್ರಿ 3ರಿಂದ ಬೆಳಗಿನ ಜಾವ 5.30ರ ಒಳಗೆ.

ಹೆಚ್ಚು ಸ್ಥಾನ ಹೊಂದಿರುವ ಪ್ರಾಂತ್ಯಗಳು

* ಪಂಜಾಬ್- 141

* ಸಿಂಧ್- 75

* ಖೈಬರ್ ಪಖ್ತೂನ್​ಖ್ವಾ- 55

* ಬಲೂಚಿಸ್ಥಾನ- 20

* ಇಸ್ಲಾಮಾಬಾದ್- 3

ಮತಪತ್ರದ ಮೂಲಕ ಚುನಾವಣೆ

ಪಾಕ್​ನಲ್ಲಿ ಇವಿಎಂ ಮೂಲಕ ಚುನಾವಣೆ ನಡೆಸಬೇಕೆಂಬ ಪ್ರಸ್ತಾವವನ್ನು ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2021 ಮೇ 2ರಂದು ನ್ಯಾಶನಲ್ ಅಸೆಂಬ್ಲಿಯಲ್ಲಿ ಮಂಡಿಸಿದರು. ಪಿಎಂಎಲ್-ಎನ್ ಅಧ್ಯಕ್ಷ ಶಾಹಬಾಜ್ ಷರೀಫ್ ಸೇರಿದಂತೆ ಪಾಕ್ 11 ಪ್ರತಿಪಕ್ಷಗಳ ಸದಸ್ಯರು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ, ಆ ಪ್ರಸ್ತಾವ ಬಿದ್ದುಹೋಯಿತು. ಪರಿಣಾಮ, ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇನ್ನೂ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್​ಗಳ (ಇವಿಎಂ) ಬಳಕೆ ಆರಂಭವಾಗಿಲ್ಲ. ಇಲ್ಲಿ ಮತಪತ್ರದ ಮೂಲಕವೇ ಮತದಾನ ನಡೆಯಲಿದೆ. ಇದಕ್ಕಾಗಿ 26 ಕೋಟಿ ಮತಪತ್ರಗಳನ್ನು ಮುದ್ರಿಸಲಾಗಿದ್ದು, ಇದರ ತೂಕ 2100 ಟನ್. ಮತದಾನದ ಸಮಯ ಮುಗಿಯುತ್ತಿದ್ದಂತೆ ಮತಏಣಿಕೆ ಆರಂಭವಾಗುತ್ತದೆ. ಮತಗಟ್ಟೆ ಅಧಿಕಾರಿಗಳು ಮತಏಣಿಕೆ ಮಾಡಿದ ಬಳಿಕ, ತಡರಾತ್ರಿ ಅಥವಾ ಬೆಳಗಿನ ಜಾವ ಫಲಿತಾಂಶ ಪ್ರಕಟಗೊಳ್ಳುತ್ತದೆ.

ಅಲ್ಪಸಂಖ್ಯಾತರು ವೋಟ್​ಬ್ಯಾಂಕ್ ಅಲ್ಲ

12.85 ಕೋಟಿ ಮತದಾರರಲ್ಲಿ ಅಲ್ಪಸಂಖ್ಯಾತರ ಮತಗಳು ಕೇವಲ 30 ಲಕ್ಷ. ಈ ಪೈಕಿ ಹಿಂದೂ ಮತದಾರರ ಸಂಖ್ಯೆ 13 ಲಕ್ಷ. ಹಾಗಾಗಿ, ಯಾವುದೇ ರಾಜಕೀಯ ಪಕ್ಷ ಇಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದಿಲ್ಲ. ಅವರ ಮತಗಳಿಕೆಗಾಗಿ ವಿಶೇಷ ತಂತ್ರಗಾರಿಕೆಯೂ ಮಾಡುವುದಿಲ್ಲ.

Pak PM

ಮತದಾರರ ಸಂಖ್ಯೆ

ಪಾಕ್​ನಲ್ಲಿ ಶೇಕಡ 44 ಮತದಾರರು 35 ವರ್ಷದೊಳಗಿನವರು. 2018ರ ನಂತರ ಮತದಾರರ ಸಂಖ್ಯೆಯಲ್ಲಿ 2.25 ಕೋಟಿ ಹೆಚ್ಚಳವಾಗಿದೆ. ಈ ಪೈಕಿ 1.25 ಕೋಟಿ ಮಹಿಳೆಯರು. ಆದರೆ, ಮಹಿಳೆಯರು ಮತದಾನ ಮಾಡುವ ಪ್ರಮಾಣ ತುಂಬ ಕಡಿಮೆ ಇದೆ. 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡ 52 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಚುನಾವಣಾ ವಿಷಯಗಳು

* ತೀವ್ರ ಬೆಲೆಯೇರಿಕೆ

* ಬಡತನ

* ನಿರುದ್ಯೋಗ

*  ವಿದೇಶಗಳಲ್ಲಿ ಪಾಕ್ ವರ್ಚಸ್ಸು ಕುಸಿದಿರುವುದು

*  ಭಾರತದ ಅಭಿವೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹೆಚ್ಚಿರುವುದು

* ಇಸ್ರೇಲ್-ಹಮಾಸ್ ಯುದ್ಧ

ಮತದಾನದ ಮುನ್ನಾದಿನ ಬಾಂಬ್ ಸ್ಪೋಟಕ್ಕೆ 25 ಬಲಿ

ಕರಾಚಿ: ರಕ್ತಸಿಕ್ತ ರಾಜಕೀಯ ಚರಿತ್ರೆ ಹೊಂದಿರುವ ಪಾಕಿಸ್ತಾನದಲ್ಲಿ ಹೊಸ ಸರ್ಕಾರದ ಆಯ್ಕೆಗಾಗಿ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಮುನ್ನಾ ದಿನವಾದ ಬುಧವಾರ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಪೋಟಗಳಲ್ಲಿ ಕನಿಷ್ಠ 25 ಜನರು ಮೃತಪಟ್ಟು 42 ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಗಳಿಂದಾಗಿ ಆತಂಕ ಸೃಷ್ಟಿಯಾಗಿದ್ದು ಚುನಾವಣೆ ಮೇಲೆ ಕರಿಛಾಯೆ ಆವರಿಸಿದೆ. ಕಣದಲ್ಲಿರುವ ಅಭ್ಯರ್ಥಿಗಳ ಚುನಾವಣಾ ಕಚೇರಿಗಳನ್ನು ಗುರಿಯಾಗಿಸಿ ಈ ಬಾಂಬ್ ದಾಳಿಗಳು ನಡೆದಿರುವುದು ದೃಢಪಟ್ಟಿದೆ.

ಗುರುವಾರದ ಮತದಾನಕ್ಕಾಗಿ ಪ್ರಾಂತ್ಯದಲ್ಲಿ ಭದ್ರತಾ ವ್ಯವಸ್ಥೆ ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಅವಳಿ ಸ್ಪೋಟಗಳನ್ನು ದೃಢಪಡಿಸಿರುವ ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ) ತಿಳಿಸಿದೆ. ಮೊದಲ ಪ್ರಕರಣದಲ್ಲಿ, ಪಿಶಿನ್ ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಅಸ್ಪಂದ್ಯಾರ್ ಖಾನ್ ಕಾಕರ್​ರ ಚುನಾವಣಾ ಕಚೇರಿಯ ಹೊರಗಡೆ ಸಂಭವಿಸಿದ ಪ್ರಬಲ ಸ್ಪೋಟದಲ್ಲಿ ಕನಿಷ್ಠ 17 ಜನರು ಮೃತರಾಗಿ 30 ಮಂದಿ ಗಾಯಗೊಂಡರು. ಅದಾದ ಕೇವಲ ಒಂದು ಗಂಟೆಯೊಳಗಡೆ, ಕಿಲ್ಲಾ ಅಬ್ದುಲ್ಲಾ ಪ್ರದೇಶದಲ್ಲಿ ಜಾಮಿಯತ್ ಉಲೇಮಾ ಇಸ್ಲಾಂ ಪಾಕಿಸ್ತಾನ ಪಕ್ಷದ ಹುರಿಯಾಳಿನ ಕಚೇರಿಯ ಹೊರಗಡೆ ಇನ್ನೊಂದು ಬಾಂಬ್ ಸ್ಪೋಟಗೊಂಡು ಎಂಟು ಮಂದಿ ಬಲಿಯಾದರು ಹಾಗೂ 12 ಜನರು ಗಾಯಗೊಂಡರು. ಕೆಲವು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಎಲ್ಲರನ್ನೂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಾಕರ್ ಕಚೇರಿಯ ಹೊರಗಡೆ ಇರಿಸಲಾಗಿದ್ದ ದೊಡ್ಡ ಚೀಲದಲ್ಲಿದ್ದ ಸ್ಪೋಟಕವನ್ನು ರಿಮೋಟ್ ಕಂಟ್ರೋಲ್​ನಿಂದ ಸ್ಪೋಟಿಸಲಾಯಿತು ಎಂದು ಬಲೂಚಿಸ್ತಾನ್ ಪಂಜ್​ಗುರ್​ನ ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಜಹ್ರಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಉಗ್ರರ ಟಾರ್ಗೆಟ್

ಜನರು ಮತ ಚಲಾಯಿಸುವುದನ್ನು ತಡೆಯುವ ನಿಟ್ಟಿನಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಭಯೋತ್ಪಾ ದಕರು ಅಭ್ಯರ್ಥಿಗಳನ್ನು ಗುರಿಯಾಗಿಸಿ ಸ್ಪೋಟಗಳನ್ನು ನಡೆಸಿದ್ದಾರೆಂದು ಜಹ್ರಿ ಹೇಳಿದ್ದಾರೆ. ಆದರೆ ನಿಗದಿಯಂತೆ ಸಾಂಗವಾಗಿ ಚುನಾವಣೆ ನಡೆಸಲು ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಬಲೂಚಿಸ್ತಾನದ ಗೃಹ ಸಚಿವ ಜಾನ್ ಅಚ್ಕಾಜೈ ದಾಳಿಗಳನ್ನು ಖಂಡಿಸಿದ್ದಾರೆ.

ಪಾಕ್​ನೊಂದಿಗೆ ಸ್ವಲ್ಪ ವಾಣಿಜ್ಯ ವ್ಯವಹಾರ

ಪಾಕ್ ಮತ್ತು ಭಾರತದ ನಡುವೆ ವಾಯು ಹಾಗೂ ಜಲ ಮಾರ್ಗಗಳ ಮೂಲಕ ಸ್ವಲ್ಪ ಪ್ರಮಾಣದ ವಾಣಿಜ್ಯ ವ್ಯವಹಾರ ನಡೆಯುತ್ತಿದೆ. ಆದರೆ ಪಾಕ್ ಭೂ ಮಾರ್ಗದ ಮೂಲಕದ ವ್ಯವಹಾರವನ್ನು ಏಕಪಕ್ಷೀಯವಾಗಿ ನಿಷೇಧಿಸಿರುವುದರಿಂದ ಭೂ ಗಡಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾದ ಅನುಪ್ರಿಯಾ ಪಟೇಲ್ ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net