

ಇಸ್ಲಾಮಾಬಾದ್: ಕ್ರೌರ್ಯ ಎಂಬುದು ಹೇಗೆಲ್ಲಾ ತನ್ನ ರೂಪವನ್ನು ತೋರಿಸುತ್ತದೆಯೋ ನಂಬುವುದು ಅಸಾಧ್ಯವೇ ಸರಿ. ಕೇವಲ ಒಂದು ಗಿಳಿಗಾಗಿ ಕೆಲಸದ ಬಾಲಕಿಯನ್ನು ದಂಪತಿ ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಇಸ್ಲಾಮಾಬಾದ್ನಲ್ಲಿ ನಡೆದಿದೆ.
ಇಲ್ಲಿ ರಾವಲ್ಪಂಡಿಯ ಬೇಗಮ್ ಅಖ್ತರ್ ರುಕ್ಸಾನಾ ದಂಪತಿ ಇಂಥ ಕುಕೃತ್ಯ ಎಸಗಿದ್ದಾರೆ. ಎಂಟು ವರ್ಷದ ಬಾಲೆ ಝರಾ ಎಂಬಾಕೆಯನ್ನು ಥಳಿಸಿ ಕೊಂದು ಹಾಕಿದ್ದಾರೆ!
ಬಾಲಕಿ ಝರಾಳಿಗೆ ಶಿಕ್ಷಣ ಕೊಡಿಸುವ ವಾಗ್ದಾನ ಮಾಡಿದ್ದ ಈ ಕ್ರೂರ ದಂಪತಿ, ಆಕೆಯನ್ನು ಮನೆಗೆ ಕರೆತಂದಿದ್ದರು. ಆದರೆ ಮನೆಕೆಲಸದಲ್ಲಿ ಅವಳನ್ನು ತೊಡಗಿಸಿಕೊಂಡಿದ್ದರು. ನಿನ್ನೆ ಬಾಲಕಿ ಕೆಲಸ ಮಾಡುವ ಸಮಯದಲ್ಲಿ ಗಿಳಿಯ ಗೂಡನ್ನು ಶುಚಿಗೊಳಿಸಲು ಹೋಗಿದ್ದಾಳೆ. ಅಚಾನಕ್ ಆಗಿ ಅದರ ಬಾಗಿಲು ತೆರೆದು ಗಿಳಿ ಹಾರಿ ಹೋಗಿದೆ.
ಇದರಿಂದ ಕುಪಿತಗೊಂಡ ಈ ದಂಪತಿ ಆಕೆಯನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ನಂತರ ಆಸ್ಪತ್ರೆಗೆ ದಾಖಲು ಮಾಡುವಂತೆ ನಟಿಸಿದ್ದಾರೆ. ಆದರೆ ಅದಾಗಲೇ ಬಾಲಕಿಯ ಮುಕ್ಕಾಲು ಜೀವ ಹೋಗಿತ್ತು! ಮೈ ಮೇಲೆ ಆಕೆಗಾಗಿರುವ ಗಾಯಗಳನ್ನು ನೋಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಇಡೀ ದೇಹ ರಕ್ತಮಯವಾಗಿತ್ತು.
ಅಷ್ಟೇ ಅಲ್ಲದೇ ತೊಡೆಯ ಸಮೀಪವೂ ಸಾಕಷ್ಟು ಗಾಯದ ಗುರುತುಗಳಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೂ ನಡೆದಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ಜೂ.6ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ತಾವು ಬಾಲಕಿಗೆ ಬಡಿದಿದ್ದಾಗಿ ದಂಪತಿ ಒಪ್ಪಿಕೊಂಡಿದ್ದಾರೆ.
ಈ ಘಟನೆ ಶರವೇಗದಲ್ಲಿ ಪ್ರಸಾರವಾಗಿ ದಂಪತಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾಜಕಾರಣಿಗಳು, ಸಂಘ ಸಂಸ್ಥೆಗಳು ಈ ಘಟನೆಯನ್ನು ಖಂಡಿಸಿವೆ. ದಂಪತಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿವೆ.
ಪಾಕಿಸ್ತಾನದಲ್ಲಿ 12 ಲಕ್ಷಕ್ಕೂ ಅಧಿಕ ಮಕ್ಕಳನ್ನು ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ. ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಕಾನೂನು ಇದ್ದರೂ ಇಲ್ಲಿ ಅದು ಜಾರಿಯಾಗುತ್ತಿಲ್ಲ ಎಂದು ಮಾನವ ಹಕ್ಕುಗಳ ಆಯೋಗದ ವರದಿ ಹೇಳಿದೆ.
2018ರಲ್ಲಿ ಇಸ್ಲಾಮಾಬಾದ್‌ನ ನ್ಯಾಯಾಧೀಶರು ಮತ್ತು ಅವರ ಪತ್ನಿ ತಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದ 10 ವರ್ಷದ ಬಾಲಕಿಯ ಕೈ ಸುಟ್ಟಿದ್ದರಿಂದ ಐದು ಲಕ್ಷ ರೂಪಾಯಿಗಳ ದಂಡವನ್ನು ಕೋರ್ಟ್ ವಿಧಿಸಿತ್ತು. ಪೊರಕೆ ಕಾಣೆಯಾಗಿದ್ದ ಕಾರಣ ಈ ದಂಪತಿ ಬಾಲಕಿಯ ಕೈ ಸುಟ್ಟಿದ್ದರು ನಂತರ ಆಕೆಯನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು. ಆದರೆ ಬೆಳಕಿಗೆ ಬರದ ಅದೆಷ್ಟೋ ಘಟನೆಗಳು ಇಲ್ಲಿ ನಡೆಯುತ್ತಲೇ ಇವೆ ಎಂದು ವರದಿ ಹೇಳಿದೆ (ಏಜೆನ್ಸೀಸ್)