ಪಾಕ್​ ಗುಂಡಿನ ದಾಳಿಗೆ ಭಾರತೀಯ ಮುಸ್ಲಿಂ ಮಹಿಳೆ ಬಲಿ: ಗಡಿಯಲ್ಲಿರುವ ಮಸೀದಿ, ಮನೆಗಳಿಗೂ ಹಾನಿ

Border vvani
Published on

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.

ರಾಂಪುರ ಸೆಕ್ಟರ್​ನಲ್ಲಿರುವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನಿ ಸೇನೆ ನಿನ್ನೆ ಅಪ್ರಚೋದಿತ ದಾಳಿ ನಡೆಸಿತ್ತು. ಬೆಳ್ಳಂಬೆಳಗ್ಗಿನ ಹೊತ್ತಿನಲ್ಲಿ ಈ ದಾಳಿ ನಡೆದಿದ್ದು, ಪಾಕ್ ಸೇನಾಪಡೆ ಮೋರ್ಟಾರ್​ಗಳು ಮತ್ತು ಇತರೆ ಶಸ್ತ್ರಗಳನ್ನು ಬಳಸಿಕೊಂಡಿದೆ. ಈ ದಾಳಿಯಲ್ಲಿ ನಾಲ್ಕು ಮನೆಗಳು ಮತ್ತು ಮಸೀದಿಗೆ ಹಾನಿ ಆಗಿದೆ. ಈ ಭಾಗದ ಅನೇಕ ಜನರನ್ನು ನಿರಾಶ್ರಿತರ ಶಿಬಿರಕ್ಕೆ ಮತ್ತು ನೆಲಮಾಳಿಗೆಯ ಸುರಕ್ಷಿತ ಬಂಕರ್​ಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವು ಕುಟುಂಬಗಳನ್ನು ಉರಿ ತಾಲೂಕಿನ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.

ಪ್ರಾಣ ಕಳೆದುಕೊಂಡ ಮಹಿಳೆಯನ್ನು ಝರೂರ್​ ಅಹ್ಮದ್ ಚೇಚಿಯ ಪತ್ನಿ ಅಖ್ತರ್ ಬೇಗಂ(48) ಎಂದು ಗುರುತಿಸಲಾಗಿದೆ. ಬತ್​ಗ್ರಾನ್​ ಎಂಬಲ್ಲಿ ಇವರ ಮನೆ ಇದ್ದು, ಪಾಕಿಸ್ತಾನದ ಶೆಲ್ ದಾಳಿಗೆ ಈಡಾಗಿದೆ. ಈ ದಾಳಿಯಲ್ಲಿ ಗಾಯಗೊಂಡ ಇನ್ನೊಬ್ಬಾಕೆ 23 ವರ್ಷ ವಯಸ್ಸು ಎಂದು ರಕ್ಷಣಾ ಪಡೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net