

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನ, ಚೀನಾ ಅಭಿವೃದ್ಧಿ ಬ್ಯಾಂಕ್ನಿಂದ (ಸಿಡಿಬಿ) ಮಂಜೂರಾಗಿರುವ 700 ದಶಲಕ್ಷ ಡಾಲರ್ ಸಾಲದ ಹಣವನ್ನು ಪಡೆದುಕೊಂಡಿದೆ. ಆದರೆ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು (ಫೊರೆಕ್ಸ್) ಸುಧಾರಿಸಲು ಇದು ಸಾಲದಾಗಿದ್ದು ಇನ್ನೂ 1,300 ದಶಲಕ್ಷ ಡಾಲರ್ ಸಾಲವನ್ನು ಪಾಕ್ ನಿರೀಕ್ಷಿಸುತ್ತಿದೆ. ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕ್ನ ಫೊರೆಕ್ಸ್ ಫೆಬ್ರವರಿ 17ರಲ್ಲಿದ್ದಂತೆ 3.25 ಶತಕೋಟಿ ಡಾಲರ್ ಆಗಿದ್ದು ಕೇವಲ ಮೂರು ವಾರದ ಆಮದಿಗೆ ಸಾಕಾಗುತ್ತದೆ.
ಫೊರೆಕ್ಸ್ ಏರಿಸಲು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹರಸಾಹಸ ಪಡುತ್ತಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಮೊತ್ತದ ಸಾಲ ಯೋಜನೆಯ ಪುನರುಜ್ಜೀವನ ವಿಳಂಬವಾಗಿರುವುದರಿಂದ ಯತ್ನಗಳಿಗೆ ಅಡ್ಡಿಯುಂಟಾಗಿದೆ. ಚೀನಾದ ಸಾಲಗಳ ಮರುಪಾವತಿಗಾಗಿ ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರದೊಳಗೆ 800 ದಶಲಕ್ಷ ಡಾಲರ್ ಮತ್ತು 500 ದಶಲಕ್ಷ ಡಾಲರ್ಗಳ ಎರಡು ವಾಣಿಜ್ಯ ಸಾಲಗಳನ್ನು ಪಡೆಯಲೂ ಪಾಕ್ ಪ್ರಯತ್ನಿಸುತ್ತಿದೆ. ಪ್ರಸಕ್ತ ಚೀನಾ ಬ್ಯಾಂಕ್ನಿಂದ ಬಂದಿರುವ ಸಾಲದ ಹಣ ಕರೊನಾ ಸಾಂಕ್ರಾಮಿಕತೆ ಮತ್ತು ವಿದೇಶಿ ಸಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಪಾಕ್ನ ಆರ್ಥಿಕ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.
ಪಾಕಿಸ್ತಾನ ಡಜನ್ಗಟ್ಟಲೆ ಭಯೋತ್ಪಾದನೆ ಸಂಘಟನೆಗಳ ಆಶ್ರಯ ತಾಣವಾಗಿದೆ ಎಂದು ಭಾರತೀಯ ಮೂಲದ ಅಮೆರಿಕನ್ ಹಾಗೂ 2024ರ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ನಿಕ್ಕಿ ಹ್ಯಾಲಿ ಹೇಳಿದ್ದಾರೆ. ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಚೀನಾ ಮತ್ತು ಪಾಕ್ನಂಥ ದೇಶಗಳಿಗೆ ವಿದೇಶಿ ನೆರವನ್ನು ಕಡಿತ ಮಾಡುವುದಾಗಿ ಪ್ರಚಾರ ಅಭಿಯಾನದಲ್ಲಿ ಘೋಷಿಸಿದ್ದಾರೆ. 51 ವರ್ಷದ ನಿಕ್ಕಿ, ಎರಡು ಬಾರಿ ದಕ್ಷಿಣ ಕ್ಯಾರೊಲಿನಾದ ಗವರ್ನರ್ ಹಾಗೂ ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ಆಗಿದ್ದಾರೆ.
ಜುಲೈ 1ರಿಂದ ದೇಶಾದ್ಯಂತ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 3.23 ರೂ. ಏರಿಕೆ ಮಾಡುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ವಿದ್ಯುತ್ ಕ್ಷೇತ್ರದ ಸಾಲ ಮತ್ತು ಹೊಣೆಗಾರಿಕೆಗಳಿಗೆ ಹಣಕಾಸು ಒದಗಿಸಲು ಮುಂದಿನ ಆರ್ಥಿಕ ವರ್ಷದಲ್ಲಿ 335 ಶತಕೋಟಿ ರೂ. ಅಗತ್ಯವಿದೆ. ಜತೆಗೆ ಹೊಸ ಸಾಲ ಮಂಜೂರಾತಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಲವು ಶರತ್ತುಗಳನ್ನು ವಿಧಿಸಿದ್ದು, ಇದರಲ್ಲಿ ವಿದ್ಯುತ್ ದರ ಏರಿಕೆ ಕೂಡ ಸೇರಿದೆ.