ಅಂದು ನಾವು​ ಒಪ್ಪಂದ ಉಲ್ಲಂಘಿಸಿದ ಪರಿಣಾಮ ಕಾರ್ಗಿಲ್​ ಯುದ್ಧವಾಯಿತು: ಮಾಜಿ ಪ್ರಧಾನಿ ನವಾಜ್​ ಷರೀಫ್

nawaz sharif
Published on

ಲಾಹೋರ್: ಆರ್ಥಿಕ ಸಂಕಷ್ಟದಿಂದಾಗಿ ವಿಶ್ವದ ಮುಂದೆ ಬೆತ್ತಲಾಗಿರುವ ಪಾಕಿಸ್ತಾನ ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಲ್ಲಿರುತ್ತದೆ. ಪಾಕಿಸ್ತಾನದಲ್ಲಿರುವ ಹಾಲಿ ಹಾಗೂ ಮಾಜಿ ಸಚಿವರು ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗುತ್ತಾರೆ. ಅದೇ ರೀತಿ ಈಗ ಮಾಜಿ ಪ್ರಧಾನಿ ನವಾಜ್​ ಷರೀಫ್​ ನೀಡಿರುವ ಹೇಳಿಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಪಾಕ್​ನ ನರಿಬುದ್ಧಿ ವಿಶ್ವದ ಮುಂದೆ ಮತ್ತೊಮ್ಮೆ ಬಯಲಾಗಿದೆ.

1999ರಲ್ಲಿ ಭಾರತದ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಹಾಗೂ ಪಾಕ್​ನ ಅಂದಿನ ಪ್ರಧಾನಿಯಾಗಿದ್ದ ನವಾಜ್​ ಷರೀಫ್​ ಇಸ್ಲಾಮಾಬಾದ್​ನಲ್ಲಿ ಸಹಿ ಮಾಡಲಾಗಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾಗಿ ತಿಳಿಸಿದ್ದಾರೆ. ಈ ವಿಚಾರ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಮಾತನಾಡಿರುವ ಪರ್ವೇಜ್​, ಮೇ 28, 1998ರಂದು ಪಾಕಿಸ್ತಾನವು ಭಾರತದ ವಿರುದ್ಧ ಐದು ಪರಮಾಣುಗಳ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ವಾಜಪೇಯಿ ಅವರು ಫೆಬ್ರವರಿ 21, 1999ರಂದು ಪಾಕಿಸ್ತಾನಕ್ಕೆ ಬಂದು ನಮ್ಮ ಜೊತೆ ಲಾಹೋರ್​ ಒಪ್ಪಂದವನ್ನು ಮಾಡಿಕೊಂಡರು. ಈ ಒಪ್ಪಂದವು ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಕೋನದ ಬಗ್ಗೆ ಮಾತನಾಡುವ ಪ್ರಗತಿಯ ಸಂಕೇತವಾಗಿತ್ತು. ಇದಾದ ಕೆಲ ತಿಂಗಳ ಬಳಿಕ ಅಂದು ನಮ್ಮ ಜನರಲ್​ ಆಗಿದ್ದ ಪರ್ವೇಜ್​ ಮುಷರಫ್​ ಮಾಡಿದ ಒಂದು ಎಡವಟ್ಟಿನಿಂದ ಎರಡು ದೇಶಗಳ ನಡುವೆ ಕಾರ್ಗಿಲ್​ ಯುದ್ಧವಾಯಿತು. ಈ ಮೂಲಕ ನಾವು ಭಾರತದೊಂದಿಗೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದ ಉಲ್ಲಂಘನೆಯಾಯಿತು ಎಂದು ಹೇಳಿದ್ದಾರೆ.

ಅಂದು ಪರಮಾಣು ಪರೀಕ್ಷಿಸದಂತೆ ಅಮೆರಿಕ ಅಧ್ಯಕ್ಷ ಬಿಲ್​ ಕ್ಲಿಂಟನ್​ 5 ಬಿಲಿಯನ್​ ಯುಎಸ್​ ಡಾಲರ್​​ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು. ಆದರೆ, ನಾನು ಅದನ್ನು ತಿರಸ್ಕರಿಸಿ ಪರಮಾಣು ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಒಂದು ವೇಳೆ ಇಮ್ರಾನ್​ ಖಾನ್​ ಆ ಜಾಗದಲ್ಲಿ ಇದ್ದಿದ್ದರೆ ಅಮೆರಿಕದವರ ಪ್ರಸ್ತಾಪವನ್ನು ಒಪ್ಪಿಕೊಂಡು ನಮ್ಮನ್ನು ತಲೆತಗಿಸುವಂತೆ ಮಾಡಿರುತ್ತಿದ್ದರು ಎಂದು ಮಾಜಿ ಪ್ರಧಾನಿ ನವಾಜ್​ ಷರೀಫ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net