

ಅಮೆರಿಕಾ: ಇಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಸಮರ ಸಾರುತ್ತಿದ್ದು, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಾಕ್, ಭಾರತಕ್ಕೆ ಬ್ಯಾಟ್ ಮಾಡುವಂತೆ ತಿಳಿಸಿತು. ಒಂದೆಡೆ ರೋಚಕ ಪಂದ್ಯದಲ್ಲಿ ಯಾರ ಮುಡಿಗೆ ಗೆಲುವು ಸೇರಲಿದೆ? ಎಂಬ ಲೆಕ್ಕಾಚಾರಗಳು ಬಲು ಜೋರಾಗಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ತಂಡದ ಮಾಜಿ ಕ್ಯಾಪ್ಟನ್ ಶಾಹಿದ್ ಆಫ್ರಿದಿ ನೀಡಿದ ಹೇಳಿಕೆಗೆ ಇದೀಗ ಕ್ರಿಕೆಟ್ ಅಭಿಮಾನಿಗಳು ವ್ಯಾಪಕ ಛೀಮಾರಿ ಹಾಕಿದ್ದಾರೆ.
ವಿಶ್ವಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ಹೈವೋಲ್ಟೇಜ್ ಪಂದ್ಯವನ್ನು ಬಹಳ ಕುತೂಹಲದಿಂದ ವೀಕ್ಷಿಸಿದ್ದು, ಪಾಕ್ನ ಮಾಜಿ ಹಿರಿಯ ಆಟಗಾರನ ಹೇಳಿಕೆ ಕೇಳಿದ ಕ್ರಿಕೆಟ್ ಅಭಿಮಾನಿಗಳು, ವ್ಯಾಪಕವಾಗಿ ಟ್ರೋಲ್ ಮಾಡಿ, ಟೀಕಿಸುತ್ತಿದ್ದಾರೆ. ಅಸಲಿಗೆ ಶಾಹೀದ್ ಆಫ್ರಿದಿ ಸಮರ್ಥಿಸಿಕೊಂಡಿದ್ದೇನು? ಯಾವ ವಿಷಯಕ್ಕೆ ಇಷ್ಟೊಂದು ಟ್ರೋಲ್ ಆಗುತ್ತಿದ್ದಾರೆ ಎಂಬುದರ ವಿವರ ಹೀಗಿದೆ.
ಕಳೆದ ಪಂದ್ಯದಲ್ಲಿ ಯುಎಸ್ಎ ತಂಡದ ವಿರುದ್ಧ ಸೂಪರ್ ಓವರ್ನಲ್ಲಿ ಹೀನಾಯ ಸೋಲು ಅನುಭವಿಸಿದ ಪಾಕ್, ನೆಟ್ಟಿಗರ ಟೀಕೆಗಳಿಗೆ ಗುರಿಯಾಗಿತ್ತು. ಇಂತಹ ಸೋಲು ನೋಡಲು ಮೈದಾನಕ್ಕೆ ಹೋಗಬೇಕಿತ್ತಾ ಎಂದೆಲ್ಲಾ ಕ್ರಿಕೆಟ್ ಅಭಿಮಾನಿಗಳು ವ್ಯಂಗ್ಯವಾಡಿದ್ದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಶಾಹಿದ್ ಆಫ್ರಿದಿ, ಯುಎಸ್ಎ ವಿರುದ್ಧದ ಪಂದ್ಯ ನಮಗೆ ಅಭ್ಯಾಸ ಪಂದ್ಯವಾಗಿತ್ತೇ ವಿನಃ ಅಸಲಿ ಆಟವಲ್ಲ ಎಂದಿದ್ದಾರೆ.
“ನಮ್ಮ ಅಭಿಯಾನ ಇಂದಿನಿಂದ ಪ್ರಾರಂಭವಾಗುತ್ತದೆ. ಅದು ಭಾರತದ ವಿರುದ್ಧದ ಪಂದ್ಯದಲ್ಲಿ. ನಾವು ನಮ್ಮ ವಿಶ್ವಕಪ್ ಪಯಣವನ್ನು ಭಾರತದ ವಿರುದ್ಧ ಪ್ರಾರಂಭಿಸುತ್ತಿದ್ದೇವೆ. ಮಳೆ ಮತ್ತು ಮೋಡ ಕವಿದ ಕಾರಣ ಟಾಸ್ ದೊಡ್ಡ ಪಾತ್ರವನ್ನು ವಹಿಸುತ್ತದೆ" ಎಂದು ಶಾಹಿದ್ ಅಫ್ರಿದಿ ತಮ್ಮ ತಂಡದ ಸೋಲನ್ನು ಸಮರ್ಥಿಸಿಕೊಂಡರು. ಇದಕ್ಕೂ ಕಿಡಿಕಾರಿರುವ ಕ್ರಿಕೆಟ್ ಪ್ರೇಮಿಗಳು, ಹೀಗೂ ಸೋಲನ್ನು ಸಮರ್ಥಿಸಿಕೊಳ್ಳಬಹುದಾ? ನಿಮ್ಮಿಂದ ಕಲಿಯಬೇಕು ಎಂದು ಟೀಕಿಸಿದ್ದಾರೆ,(ಏಜೆನ್ಸೀಸ್).