ಗುಡ್ ಮಾರ್ನಿಂಗ್ ಡಿಯರ್ ಸಂದೇಶಕ್ಕೆ ಪತಿ-ಪತ್ನಿ ನಡುವೆ ಜಗಳ

crime
Published on

ಬೆಂಗಳೂರು: ‘ಗುಡ್ ಮಾರ್ನಿಂಗ್ ಡಿಯರ್’ ಎಂಬ ಸಂದೇಶದ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿ ಪತ್ನಿ ಮನೆ ಬಿಟ್ಟು ಹೋಗಿರುವ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ದಾಖಲಾಗಿದೆ.
ಮಹಾಲಕ್ಷ್ಮೀಪುರಂ ಮೈಕೋ ಲೇಔಟ್‌ನಲ್ಲಿ ಜೂ.೪ರಂದು ಈ ಘಟನೆ ನಡೆದಿದೆ. ಮನೆ ಬಿಟ್ಟು ಹೋಗಿರುವ ೩೫ ವರ್ಷದ ಪತ್ನಿಯನ್ನು ಹುಡುಕಿ ಕೊಡುವಂತೆ ೪೩ ವರ್ಷದ ಪತಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರರು ಜೂ.೪ರಂದು ಬೆಳಗ್ಗೆ ೧೦.೩೦ಕ್ಕೆ ಮನೆಯಲ್ಲಿ ತಿಂಡಿ ತಿನ್ನುತ್ತಿದ್ದರು. ಈ ವೇಳೆ ಪತ್ನಿಯ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿದೆ. ಈ ವೇಳೆ ವಾಟ್ಸಾಪ್ ಚಾಟ್‌ನಲ್ಲಿ ಆ ವ್ಯಕ್ತಿಗೆ ಪತ್ನಿಯು ಗುಡ್ ಮಾರ್ನಿಂಗ್ ಡಿಯರ್ ಎಂಬ ಸಂದೇಶ ಕಳುಹಿಸಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಪತಿಯು ಪತ್ನಿಯನ್ನು ಕುರಿತು ನಗುತ್ತಲೇ ಈ ರೀತಿ ಸಂದೇಶ ಏಕೆ ಮಾಡುತ್ತೀಯಾ? ಸರ್ ಅಥವಾ ಅಣ್ಣ ಎಂದು ಮೇಸೆಜ್ ಮಾಡು ಅಂತಾ ಹೇಳಿದ್ದಾರೆ. ಈ ವಿಚಾರಕ್ಕೆ ಪತ್ನಿ ಜಗಳ ಮಾಡಿದ್ದಾರೆ. ಅಷ್ಟರಲ್ಲಿ ಪತಿ ಸುಮ್ಮನಾಗಿದ್ದಾರೆ. ಬೇಜಾರು ಮಾಡಿಕೊಳ್ಳಬೇಡ ಎಂದು ಪತ್ನಿಗೆ ಹೇಳಿ, ಮಗನನ್ನು ಕರೆದುಕೊಂಡು ಮಲಗುವ ಕೋಣೆಗೆ ತೆರಳಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ಅಡುಗೆ ಕೆಲಸದ ಮಹಿಳೆ ರೂಮ್ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆದು ಏನೆಂದು ಪ್ರಶ್ನೆ ಮಾಡಿದಾಗ, ಅಕ್ಕ ನಿಮ್ಮಿಬ್ಬರಿಗೂ ಊಟ ಕೊಡಲು ಹೇಳಿ ಹೋಗಿದ್ದಾರೆ ಎಂದಿದ್ದಾರೆ. ಎಲ್ಲಿಗೆ ಹೋದಳು ಎಂದು ಕೇಳಿದಾಗ, ನನಗೆ ಗೊತ್ತಿಲ್ಲ ಎಂದು ಮನೆಗೆಲಸದ ಮಹಿಳೆ ಹೇಳಿದ್ದಾರೆ.
ಬಳಿಕ ಪತಿಯು ಪತ್ನಿ ಮೊಬೈಲ್‌ನ ಎರಡು ಸಂಖ್ಯೆಗಳಿಗೂ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬಂದಿದೆ. ಮನೆಯನ್ನು ಪರಿಶೀಲಿಸಿದಾಗ ಪತ್ನಿಯ ಮನೆಯಿಂದ ಹೊರಡುವ ಮುನ್ನ ವಡವೆಗಳನ್ನು ಬೀರುವಿನಲ್ಲಿ ಇರಿಸಿರುವುದು ಕಂಡು ಬಂದಿದೆ. ಮನೆಯ ಹೊರೆಗೆ ಬಂದು ನೋಡಿದಾಗ ಸ್ಕೂಟರ್ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಈ ವೇಳೆ ಎಲ್ಲ ಕಡೆ ಹುಡುಕಾಡಿದರೂ ಪತ್ನಿ ಪತ್ತೆಯಾಗಿಲ್ಲ. ಹೀಗಾಗಿ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net