

ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಷಾರ ಭೇಟಿಯ ಸಮಯದಲ್ಲೇ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಟಿ20 ವರ್ಲ್ಡ್ ಕಪ್ ಕ್ರಿಕೆಟ್ ವಿಜಯವನ್ನು ಆಚರಿಸಲಾಗಿದೆ. ಭಾರತ ವಿರೋಧಿ ಘೋಷಣೆಗಳನ್ನು ಹಾಕಲಾಗಿದೆ ಎಂದು ಮಹಾರಾಷ್ಟ್ರದ ಶಿವ ಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
'ವಿರಾಟ್ ಕೊಹ್ಲಿಯ ಭಾರತ ತಂಡದ ವಿರುದ್ಧ ಪಾಕ್ ತಂಡ ಗೆದ್ದುದಕ್ಕೆ ಸಂಭ್ರಮಾಚರಣೆ' ಎಂದು ಯುವಕರು ಪಟಾಕಿಗಳನ್ನು ಸಿಡಿಸುತ್ತಿರುವ ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ರಾವತ್, "ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾಶ್ಮೀರದಲ್ಲೇ ಇರುವ ಸಮಯದಲ್ಲಿ ಟಿ20ಯಲ್ಲಿ ಪಾಕಿಸ್ತಾನಿ ತಂಡದ ಗೆಲುವು ಹಾಗೂ ಭಾರತದ ಸೋಲಿನ ಈ ರೀತಿಯಾದ ಸಂಭ್ರಮಾಚರಣೆ ಮಾಡಿದರೆ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರೆ, ಅದು ಖಂಡಿತವಾಗಿಯೂ ಚಿಂತೆಯ ವಿಷಯವಾಗಿದೆ. ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಬರೆದಿದ್ದಾರೆ. ಅವರ ಈ ಟ್ವೀಟ್ನ ಕೊನೆಯಲ್ಲಿ ಜೈ ಹಿಂದ್! ವಂದೇ ಮಾತರಂ! ಎಂದು ರಾಷ್ಟ್ರಭಕ್ತಿಯ ಘೋಷವಾಕ್ಯಗಳನ್ನೂ ನಮೂದಿಸಿದ್ದಾರೆ. (ಏಜೆನ್ಸೀಸ್)