Nitin Gadkari on E20 | ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆ ಬಗ್ಗೆ ಟೀಕೆ; ಹಣ ನೀಡಿ ನನ್ನ ತೇಜೋವಧೆ ಮಾಡಿಸುತ್ತಿದ್ದಾರೆ ಎಂದ ಕೇಂದ್ರ ಸಚಿವ ಗಡ್ಕರಿ!

Nitin Gadkari
Published on

Nitin Gadkari on E20: ಸರ್ಕಾರದ ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆಯ ವಿರುದ್ಧ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನನ್ನ ತೇಜೋವಧೆ ಮಾಡಲು ಹಣ ನೀಡಿ ರಾಜಕೀಯ ಮಾಡುತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ದೆಹಲಿಯಲ್ಲಿ ಗುರುವಾರ (ಸೆಪ್ಟೆಂಬರ್​​ 11) ನಡೆದ ಭಾರತೀಯ ಆಟೋಮೊಬೈಲ್ ತಯಾರಕರ ಸಂಘದ (SIAM) 65 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಸಾಂಪ್ರದಾಯಿಕ ಇಂಧನದೊಂದಿಗೆ ಶೇಕಡಾ 20 ರಷ್ಟು ಎಥೆನಾಲ್ ಅನ್ನು ಬೆರೆಸುವ E20 ಪೆಟ್ರೋಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳವಳಗಳ ವ್ಯಕ್ತವಾಗುತಿದ್ದು, ಇಂಧನವು ಸುರಕ್ಷಿತವಾಗಿದೆ ಮತ್ತು ನಿಯಂತ್ರಕರು ಮತ್ತು ವಾಹನ ತಯಾರಕರು ಇಬ್ಬರು ಇದನ್ನು ಬೆಂಬಲಿಸುತ್ತಾರೆ ಎಂದರು.

ARAI ಮತ್ತು ಸುಪ್ರೀಂ ಕೋರ್ಟ್ E20 ಕಾರ್ಯಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ್ದು, ನನ್ನನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡು, ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಹಣ ನೀಡಿ ದುರುದ್ದೇಶದಿಂದ ಅಭಿಯಾನ ನಡೆಸಿದ್ದಾರೆ, ಆದ್ದರಿಂದ ಅದರ ಬಗ್ಗೆ ಗಮನ ಹರಿಸಬೇಡಿ ಎಂದರು.

ಇತ್ತೀಚೆಗೆ ಎಥೆನಾಲ್ ಮಿಶ್ರಣದ ಕುರಿತು ಜನರಿಂದ ಸಚಿವ ಗಡ್ಕರಿ ತೀವ್ರ ಟೀಕೆ ಎದುರಿಸುತ್ತಿದ್ದು, ವಾಹನ ಚಾಲಕರು ಇಂಧನವು ಮೈಲೇಜ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹಳೆಯ ವಾಹನಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತಜ್ಞರು ಮತ್ತು ಕೆಲವು ಗ್ಯಾರೇಜ್‌ಗಳು 2023 ರ ಪೂರ್ವದ ಮಾದರಿಗಳ ಮಾಲೀಕರಿಂದ ದೂರುಗಳನ್ನು ವರದಿ ಮಾಡಿವೆ ಎಂದು ವರದಿಯಾಗಿದೆ. ಈ ಮಟ್ಟದ ಟೀಕೆ ವ್ಯಕ್ತವಾದರು ಸಚಿವ ಗಡ್ಕರಿ ತಮ್ಮ ಸಮರ್ಥನೆಯನ್ನು ಮುಂದುವರೆಸಿದ್ದು, ಆಗಸ್ಟ್‌ನಲ್ಲಿ, ಬ್ಯುಸಿನೆಸ್ ಟುಡೇ ಇಂಡಿಯಾ@100 ಶೃಂಗಸಭೆಯಲ್ಲಿ, E20 ನಿಂದ ಕಾರು ಹಾನಿಗೊಳಗಾದ ಒಂದೇ ಒಂದು ನಿದರ್ಶನ ತೋರಿಸಲು ಟೀಕಾಕಾರರಿಗೆ ಸವಾಲು ಹಾಕಿದರು, ಭಾರತದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​(ARAI) ಅಥವಾ SIAM ಯಾವುದೇ ಪರಿಶೀಲಿಸಿದ ಹಾನಿಯ ಪ್ರಕರಣವನ್ನು ಫ್ಲ್ಯಾಗ್ ಮಾಡಿಲ್ಲ ಎಂದು ಹೇಳಿದರು.

ಅರ್ಜಿ ವಜಾಗೊಳಿಸಿದ ಸುಪ್ರೀಂ...

ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ E20 ಬಿಡುಗಡೆಯನ್ನು ನಿಲ್ಲಿಸಲು ಮತ್ತು ಪಂಪ್‌ಗಳಲ್ಲಿ ಎಥೆನಾಲ್-ಮುಕ್ತ ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಲು ಪ್ರಯತ್ನಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಸರ್ಕಾರದ ನಿಲುವನ್ನು ಬಲಪಡಿಸಿತು. ವಾಹನ ತಯಾರಕರು ಮತ್ತು ಇಂಧನ ಪೂರೈಕೆದಾರರು ಸಹ E20 ಗಾಗಿ ವಿನ್ಯಾಸಗೊಳಿಸಲಾದ ವಾಹನಗಳಿಗೆ ವಾರಂಟಿಗಳು ಮಾನ್ಯವಾಗಿರುತ್ತವೆ ಎಂದು ಹೇಳಿದ್ದಾರೆ.

ರೈತರ ಆದಾಯ ಬಲಪಡಿಸುತ್ತದೆ ಎಂದ ಗಡ್ಕರಿ

ಎಥೆನಾಲ್ ಮಿಶ್ರಣವು ತೈಲ ಆಮದು ಕಡಿಮೆ ಮಾಡುತ್ತದೆ, ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳುತ್ತದೆ. ರೈತರಿಗೆ ಹೊಸ ಆದಾಯ ಅವಕಾಶಗಳ ಪ್ರತಿಪಾದನೆಯನ್ನು ಗಡ್ಕರಿ ಪುನರುಚ್ಚರಿಸಿದರು.

ನಾವು ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರ ಪರಿಣಾಮವಾಗಿ, ಯುಪಿ, ಬಿಹಾರ ಮತ್ತು ದೇಶಾದ್ಯಂತ ಮೆಕ್ಕೆಜೋಳ ಕೃಷಿ ಮೂರು ಪಟ್ಟು ಹೆಚ್ಚಾಗಿದೆ ಎಂದರು. ದೃಢೀಕೃತ ಸ್ಕ್ರ್ಯಾಪಿಂಗ್ ಕೇಂದ್ರದಲ್ಲಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಜಿಎಸ್ಟಿ ಪ್ರಯೋಜನವನ್ನು ನೀಡುವಂತೆ ನಾನು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ವಿನಂತಿಸಿದ್ದೇನೆ ಎಂದು ಸಚಿವರು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net