

terror attack| ಮಂಗಳವಾರ (22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಈ ದಾಳಿಯಲ್ಲಿ ಗುಜರಾತ್ನ ಭಾವನಗರ ಜಿಲ್ಲೆಯ ತಂದೆ-ಮಗ ಇಬ್ಬರನ್ನೂ ಕೂಡ ಹತ್ಯೆ ಮಾಡಲಾಗಿದೆ.
ಮಾಹಿತಿಯ ಪ್ರಕಾರ ಭಾವನಗರದ ಸುಮಾರು 20 ಜನರು ಆಧ್ಯಾತ್ಮಿಕ ನಾಯಕ ಮೊರಾರಿ ಬಾಪು ಅವರ ರಾಮ ಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಶ್ಮೀರಕ್ಕೆ ಪ್ರಯಾಣಿಸಿದ್ದರು. ದಾಳಿಯ ದಿನದಂದು ಇವರು ಪಹಲ್ಗಾಮ್ಗೆ ಹೋಗಿದ್ದಾಗ ತಂದೆ ಹಾಗೂ ಮಗನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ.
ಯತೀಶ್ ಪರ್ಮಾರ್ ಮತ್ತು ಅವರ ಮಗ ಸ್ಮಿತ್ ಪರ್ಮಾರ್ ಮೃತ ವ್ಯಕ್ತಿಯಾಗಿದ್ದಾರೆ. ತಂದೆ-ಮಗ ಇಬ್ಬರೂ ಏಪ್ರಿಲ್ 16 ರಂದು ಮೊರಾರಿ ಬಾಪು ಅವರ ಆಧ್ಯಾತ್ಮಿಕ ಪ್ರವಚನದಲ್ಲಿ ಭಾಗವಹಿಸಲು ಯತೀಶ್ ಅವರ ಪತ್ನಿ ಕಾಜಲ್ ಜೊತೆಗೆ ಸುರೇಂದ್ರನಗರದಿಂದ ಜಮ್ಮು ತಾವಿಗೆ ರೈಲು ಪ್ರಯಾಣಿಸಿದ್ದರು. ದುರಂತವೆಂದರೆ ಕಾಜಲ್ ಮಾತ್ರ ದಾಳಿಯಿಂದ ಬದುಕುಳಿದಿದ್ದಾರೆ. ಆದರೆ ಯತೀಶ್ ಮತ್ತು ಸ್ಮಿತ್ ಇಬ್ಬರೂ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 29 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ದಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ 'ದಿ 'ರೆಸಿಸ್ಪನ್ಸ್ ಫ್ರಂಟ್ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
(ಏಜೆನ್ಸೀಸ್)
2019 ರ ಪುಲ್ವಾಮಾ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ ಎಂದು ಹೇಳಲಾಗಿದೆ. ಈ ಹತ್ಯೆಗಳು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಮುಖ ನಗರಗಳಲ್ಲಿ ಭದ್ರತಾ ಎಚ್ಚರಿಕೆಗಳನ್ನು ಹೆಚ್ಚಿಸಲಾಗಿದೆ.