

ನವದೆಹಲಿ: ಕರೊನಾ ಲಸಿಕೆಗಿನ್ನು ಹೆಚ್ಚು ಕಾಯಬೇಕಿಲ್ಲ ಎನಿಸುತ್ತಿದೆ. ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲೂ ಕರೊನಾ ಲಸಿಕೆ ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ ಎಂದು ಸಂಶೋಧನಾ ತಂಡ ಹೇಳಿದೆ.
ಬ್ರೆಜಿಲ್ನಲ್ಲಿ ಐದು ಸಾವಿರ ಕರೊನಾ ರೋಗಿಗಳ ಮೇಲೆ ವಿವಿ ಅಭಿವೃದ್ಧಿಪಡಿಸಿದ ಲಸಿಕೆ ಪ್ರಯೋಗಿಸಲಾಗಿದೆ. ಅಡೆನೊ ವೈರಸ್ ವಿಧಾನದ ಮೂಲಕ ಲಸಿಕೆಯನ್ನು ತಯಾರಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲೂ ಇದು ಸುರಕ್ಷಿತವಾಗಿದೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದ ರೋಗಿಗಳ ಮೇಲೂ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ.
ಚಿಂಪಾಜಿಯಿಂದ ಪಡೆಯಲಾಗಿದ್ದ ಅಡೆನೊ ವೈರಸ್ ಲಸಿಕೆಗಾಗಿ ಬಳಸಲಾಗಿದೆ. ಇದು ಮಾನವರಲ್ಲಿ ಹರಡುವುದಿಲ್ಲ. ಹೀಗಾಗಿ ಅತ್ಯಂತ ಸುರಕ್ಷಿತವಾಗಿದೆ. ಇದಕ್ಕೆ ಕರೊನಾ ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಉಂಟು ಮಾಡಬಲ್ಲ ಕೆಲ ಜೀನ್ಗಳನ್ನು ಸೇರಿಸಲಾಯಿತು ಎಂದು ಸಂಶೋಧನಾ ತಂಡದ ಮುಖ್ಯಸ್ಥೆ ಪ್ರೊ. ಸಾರಾ ಗಿಲ್ಬರ್ಟ್ ಹೇಳಿದ್ದಾರೆ.
ಇದೇ ತಂತ್ರ ಬಳಸಿ ಹಲವು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಕೂಡ ಉತ್ತಮ ವಿಷಯವೇ ಆಗಿದೆ. ಲಸಿಕೆಯಲ್ಲಿ ಒಬ್ಬರೇ ಪಾರಮ್ಯ ಪಡೆಯುವ ಬದಲು ಹಲವು ಲಸಿಕೆಗಳು ತಯಾರಾಗುವುದು ಉತ್ತಮ ಎಂಬುದು ಅವರ ಅಭಿಪ್ರಾಯ. ವಿಶ್ವಸಂಸ್ಥೆಯ ರಾಯಭಾರಿಗಳೊಂದಿಗಿನ ಸಂವಾದದಲ್ಲಿ ಸಾರಾ ಈ ವಿಷಯವನ್ನು ತಿಳಿಸಿದ್ದಾರೆ. ಒಂದು ವೇಳೆ ಆಕ್ಸ್ಫರ್ಡ್ ವಿವಿ ಲಸಿಕೆ ಯಶಸ್ವಿಯಾದಲ್ಲಿ ಇತರ ಲಸಿಕೆಗಳು ಕೂಡ ಯಶಸ್ವಿಯಾಗಲಿವೆ ಎಂಬ ವಿಶ್ವಾಸ ಅವರದ್ದಾಗಿದೆ.
ಅಡೆನೊ ವೈರಸ್ ವಿಧಾನದಲ್ಲಿಯೇ ಫ್ಲೂ, ಚಿಕುನ್ಗುನ್ಯಾ, ಜೈಕಾ, ಈ ಮೊದಲಿನ ಕರೊನಾವೈರಸ್ ಹಾಗೂ ಮಧ್ಯಪ್ರಾಚ್ಯದಲ್ಲಿ ಕಂಡು ಬಂದ ಎಂಇಆರ್ಎಸ್ ಕಾಯಿಲೆಗೂ ಲಸಿಕೆ ತಯಾರಿಸಲಾಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ, ಎಲ್ಲರಿಗೂ ಲಭ್ಯವಾಗುವಂಥ ಲಸಿಕೆ ತಯಾರಿಸಲು ಔಷಧ ಉತ್ಪಾದಕರೆಲ್ಲ ಒಂದಾಗಬೇಕು ಎನ್ನುವುದು ಸಾರಾ ಅಭಿಪ್ರಾಯ.
ಇನ್ನೊಂದು ಸಂತೋಷದ ವಿಷಯವೆಂದರೆ, ಆಕ್ಸ್ಫರ್ಡ್ ವಿವಿಯೊಂದಿಗೆ ಕೈಜೋಡಿಸಿರುವ ಆಸ್ಟ್ರಾಜೆನೆಕಾ ಕಂಪನಿ ಪ್ರಾಯೋಗಿಕ ಲಸಿಕೆಯನ್ನು ಉತ್ಪಾದಿಸಲು ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕೆಲ ತಿಂಗಳಲ್ಲಿ ಭಾರತದಲ್ಲೂ ಈ ಲಸಿಕೆ ಉತ್ಪಾದನೆಯಾಗಿ, ದೊರೆಯುವುದು ಖಚಿತ.