

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ವಿಚಾರ ಹಾಗೂ ವಿವಾದಗಳಿಂದಲೂ ಅಮಲಾ ಪೌಲ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ವೈಯಕ್ತಿಕ ವಿಚಾರಕ್ಕೆ ಮತ್ತೊಮ್ಮೆ ಅಮಲಾ ಮುನ್ನೆಲೆಗೆ ಬಂದಿದ್ದಾರೆ.
ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಅಮಲಾ ಮದುವೆಯಾದರು. ಆ ಬಳಿಕವೂ ನಟನೆ ಮುಂದುವರಿಸಿದರು. ಆದರೆ, ಇದು ವಿಜಯ್ ಕುಟುಂಬಕ್ಕೆ ಇಷ್ಟವಾಗಲಿಲ್ಲ. ಇದರ ಪರಿಣಾಮ ವಿಜಯ್ ಮತ್ತು ಅಮಲಾ ನಡುವೆ ಡಿವೋರ್ಸ್ ಆಯಿತು. ಮದುವೆಯಾದ ಕೆಲವೇ ವರ್ಷಗಳಲ್ಲಿ ಅಮಲಾ ವಿಚ್ಛೇದನ ಪಡೆದುಕೊಂಡರು. ಅಮಲಾ ಮತ್ತು ಧನುಷ್ ನಡುವೆ ತೀರಾ ಆಪ್ತತೆ ಇದ್ದಿದ್ದೇ ಡಿವೋರ್ಸ್ಗೆ ಕಾರಣ ಸುದ್ದಿಯೂ ಕೂಡ ಆ ಸಂದರ್ಭದಲ್ಲಿ ಭಾರೀ ಚರ್ಚೆಯಾಯಿತು. "ವೇಳಯಿಲ್ಲೈ ಪಟ್ಟದಾರಿ" ಸಿನಿಮಾದಲ್ಲಿ ಅಮಲಾ-ಧನುಷ್ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದಿಂದಲೇ ಇಬ್ಬರ ನಡುವೆ ಆಪ್ತತೆ ಬೆಳೆದಿದ್ದು, ಇದು ಮದುವೆಯಾಚೆಗಿನ ಸಂಬಂಧಕ್ಕೂ ಕಾರಣವಾಗಿದೆ ಎಂದು ಮಾತು ಕಾಲಿವುಡ್ ಗಲ್ಲಿಯಲ್ಲಿ ಆಗಾಗ ಕೇಳಿಬರುತ್ತಿದೆ.
ಅಮಲಾ ಪೌಲ್ ಕೇರಳದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಪೊಲೀಸ್ ಅಧಿಕಾರಿ. ಮಗಳ ಮಾಡೆಲಿಂಗ್ ಆಸೆಯನ್ನು ತಿಳಿದು ಆಕೆಗೆ ಸಹಾಯ ಮಾಡುತ್ತಾ ಬಂದರು. ಬಳಿಕ ತಮಿಳು ಚಿತ್ರರಂಗಕ್ಕೆ ಬಂದ ಅವರು ಆರಂಭದಲ್ಲಿ ವೀರಶೇಖರನ್ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೋಲುಂಡಿತು. ನಂತರ ವಿವಾದಾತ್ಮಕ "ಸಿಂಧೂ ಸಮವೇಲಿ" ಚಿತ್ರದಲ್ಲಿ ನಟಿಸಿದರು. ಇದೂ ಕೈ ಹಿಡಿಯಲಿಲ್ಲ. ಆದರೆ, ಮೈನಾ ಸಿನಿಮಾ ಅಮಲಾಗೆ ಟರ್ನಿಂಗ್ ಪಾಯಿಂಟ್ ಆಯಿತು. ನಂತರ ವಿಜಯ್ ಎದುರು ಥಲೈವಾ ಚಿತ್ರದಲ್ಲಿ ನಟಿಸಿ ಉನ್ನತ ಸ್ಥಾನಕ್ಕೇರಿದರು. ಅಮಲಾ ಪೌಲ್ ತಲೈವಾ ಚಿತ್ರದಲ್ಲಿ ಕೆಲಸ ಮಾಡುವಾಗ ಎ.ಎಲ್. ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎ.ಎಲ್. ವಿಜಯ್ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಇಬ್ಬರು ಮದುವೆಯಾದರು.
ಮದುವೆಯಾದ ಮೇಲೂ ಸಿನಿಮಾ ಶೂಟಿಂಗ್ ಮುಗಿಸಿ ತಡರಾತ್ರಿ ಮನೆಗೆ ಬರುವುದು ಎ.ಎಲ್. ವಿಜಯ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ನಂತರ ಇದೇ ದೊಡ್ಡ ಸಮಸ್ಯೆಯಾಗಿ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟರು. ಈ ವಿಚ್ಛೇದನಕ್ಕೆ ಧನುಷ್ ಜತೆಗಿನ ಆಪ್ತತೆಯು ಕಾರಣ ಎನ್ನಲಾಗಿದೆ. ಧನುಷ್ ಅವರು ವೇಳಯಿಲ್ಲೈ ಪಟ್ಟಧಾರಿ ಚಿತ್ರದಲ್ಲಿ ನಟಿಸುತ್ತಿರುವಾಗ ಅಮಲಾ ಪೌಲ್ ಅವರ ಮನೆಯಲ್ಲಿ ಉಳಿಯಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ.
ಈ ವಿಷಯ ರಜನಿಯ ಕಿವಿಗೆ ಬಿದ್ದಾಗ, ತಕ್ಷಣ ಅಮಲಾ ಮನೆಗೆ ಹೋಗುತ್ತಾರೆ. ಧನುಷ್ ಕುಟುಂಬಸ್ಥನಾಗಿದ್ದು, ಆತನಿಗೂ ಪತ್ನಿ ಮತ್ತು ಮಕ್ಕಳಿದ್ದಾರೆ. ಆತನಿಂದ ದೂರಾಗದಿದ್ದರೆ, ನನ್ನ ಇನ್ನೊಂದು ಮುಖ ನೋಡುಬೇಕಾಗುತ್ತದೆ ಎಂದು ಅಮಲಾಗೆ ರಜನಿ ಬೆದರಿಕೆ ಹಾಕಿದ್ದರು. ಈ ಘಟನೆಯ ನಂತರ ಅಮಲಾಗೆ ಅವಕಾಶಗಳು ಕಡಿಮೆಯಾದ ಕಾರಣ ಅವರು ಕೇರಳಕ್ಕೆ ಹೋಗಿದ್ದಾರೆ ಎಂದು ಸೆಯ್ಯಾರು ಬಾಲು ಹೇಳಿದ್ದಾರೆ.
ಕಾಲಿವುಡ್ನ ಸ್ಟಾರ್ ದಂಪತಿಗಳೆಂದೇ ಖ್ಯಾತರಾಗಿದ್ದ ನಟ ಧನುಷ್ ಮತ್ತು ಸೂಪರ್ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ 2022ರ ಜನವರಿ 17ರಂದು ಏಕಾಏಕಿ ಗುಡ್ ಬೈ ಹೇಳಿದ್ದರು. ಈ ಸುದ್ದಿ ಸಿನಿಮಾ ರಂಗದಲ್ಲೇ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಜ. 17 ರಂದು ಟ್ವೀಟ್ ಮೂಲಕ ಡಿವೋರ್ಸ್ ನಿರ್ಧಾರ ತಿಳಿಸಿದ ಧನುಷ್, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದರು. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.
ಐಶ್ವರ್ಯಾ ಮತ್ತು ಧನುಷ್ 2004ರ ನವೆಂಬರ್ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್)