ರಾಜ್ಯದಲ್ಲಿ 15 ಸಾವಿರ ಸರ್ಕಾರಿ ವಾಹನಗಳು ಗುಜರಿಗೆ: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ; ಮೊದಲ ವರ್ಷ 500 ವೆಹಿಕಲ್

Vidhanasoudha
Published on

ಬೆಂಗಳೂರು: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ 2022ನ್ನು ಹಂತಹಂತವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿರುವ 15 ವರ್ಷ ಪೂರೈಸಿರುವ 15,295 ವಾಹನಗಳು ನಾಶಪಡಿಸುವ ಪಟ್ಟಿಯಲ್ಲಿದ್ದು, ಮೊದಲ ಹಂತದಲ್ಲಿ ಐದು ಸಾವಿರ ವಾಹನಗಳನ್ನು ನಾಶಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ಶುಕ್ರವಾರ ಅನುಮತಿ ನೀಡಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಕಾನೂನು ಸಚಿವ ಎಚ್.ಕೆ ಪಾಟೀಲ್, ಗುಜರಿ ಪಾಲಿಸಿಯನ್ನು ಜಾರಿ ಮಾಡುವಂತೆ ಕೇಂದ್ರ ಸರ್ಕಾರ ನಿರಂತರ ಒತ್ತಡ ಹೇರುತ್ತಿದೆ. 15 ವರ್ಷ ಬಳಕೆ ಮಾಡಿದ ಸರ್ಕಾರಿ ವಾಹನಗಳನ್ನು ಗುರುತಿಸಲಾಗಿದ್ದು, ಹಂತಹಂತವಾಗಿ ಅವುಗಳನ್ನು ನಾಶ ಪಡಿಸಬೇಕೆಂದು ನಿರ್ಧರಿಸಲಾಗಿದೆ ಎಂದು ವಿವರಿಸಿದರು. ಗುಜರಿಯಲ್ಲಿ ನಾಶವಾಗುವ ವಾಹನಗಳು ಒಂದು ವರ್ಷದ ಅವಧಿಯಲ್ಲಿ ಯಾವುದಾದರೂ ದಂಡ ಪ್ರಕರಣ ಎದುರಿಸುತ್ತಿದ್ದರೆ ಒಂದು ವರ್ಷದ ಅವಧಿಯ ವಿನಾಯ್ತಿ ನೀಡಲಾಗುತ್ತದೆ. ಒಂದು ವಾಹನ ನಾಶಪಡಿಸುವುದರಿಂದ 10 ಲಕ್ಷ ರೂ. ವರೆಗೂ ನಷ್ಟವಾಗಲಿದೆ. ಅಂದಾಜು 500 ಕೋಟಿ ರೂ. ನಷ್ಟವಾಗುವುದು. ಹಾಗೆಯೇ, ಕೇಂದ್ರದಿಂದ ನೂರು ಕೋಟಿ ಪೋ›ತ್ಸಾಹಕ ಧನ ಲಭಿಸಲಿದೆ ಎಂದು ತಿಳಿಸಿದರು. ಅದೇ ರೀತಿ ಮೋಟಾರು ವಾಹನ ಕಾಯ್ದೆಯಡಿ ಎಲೆಕ್ಟ್ರಾನಿಕ್ ಮಾನಿಟರಿಂಗ್ ಮತ್ತು ಎನ್ ಫೋರ್ಸ್​ವೆುಂಟ್ ಆಫ್ ರೋಡ್ ಸೇಫ್ಟಿ ಯೋಜನೆಯನ್ನು 20 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನ ಗೊಳಿಸಲು ಅನುಮೋದನೆ ನೀಡಲಾಗಿದೆ. ಧಾರವಾಡ, ಬೆಂಗಳೂರು, ಗದಗ ಸೇರಿ ಪ್ರಮುಖ ನಗರಗಳಲ್ಲಿ ಕ್ಯಾಮರಾ ಸೇರಿ ವಿವಿಧ ಉಪಕರಣ ಬಳಸಿ ಅಪಘಾತ ನಿಯಂತ್ರಿಸಲಾಗುತ್ತದೆ ಎಂದು ಹೇಳಿದರು.

ಸಭೆಯ ಪ್ರಮುಖ ನಿರ್ಣಯ

  • ಕುಂಚಿಟಿಗ ಜಾತಿಯನ್ನು ಕೇಂದ್ರದ ಹಿಂದುಳಿದ ವರ್ಗಗಳ ಜಾತಿಗೆ ಸೇರಿಸಲು ಶಿಫಾರಸು
  • ಕೊಡವ ಸಮಾಜದಲ್ಲಿ ಕೊಡಗರು ಎಂದಿತ್ತು, ಕೊಡವ ಎಂದು ಸರಿಪಡಿಸಲಾಗಿದೆ
  • ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆ ಕಾಮಗಾರಿ ಪೂರ್ಣ ಗೊಳಿಸಲು 49.50 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಅನುಮೋದನೆ.
  • ಕೆಎಸ್​ಎಸ್​ಐಡಿಸಿಯಿಂದ ಚಿತ್ತಾಪುರ, ಕೋಡ್ಕಣಿ, ಕಣಗಾಲ, ಬದನಗುಪ್ಪೆ, ಇಂಡಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ 144 ಎಕರೆ ಜಮೀನು ಸ್ವಾಧೀನಕ್ಕೆ 166 ಕೋಟಿ ರೂ. ವೆಚ್ಚಕ್ಕೆ ಮಂಜೂರು. ಹುಬ್ಬಳ್ಳಿ ಮತ್ತು ಕಲಬುರಗಿ, ಗದಗದಲ್ಲಿ ಸಹಿತ ಭೂ ಸ್ವಾಧೀನಕ್ಕೆ ಸಮ್ಮತಿ.
  • ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸುತ್ತಿರುವ 6 ಸರ್ಕಾರಿ ಅಭಿಯೋಜಕರ ಸೇವೆ ಒಂದು ವರ್ಷ ಮುಂದುವರಿಕೆ ಅನುಮೋದನೆ.
  • ಕೆಪಿಎಸ್​ಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ನಿವೃತ್ತಿ ವೇತನ ಕುರಿತ ಕಾಯ್ದೆ ತಿದ್ದುಪಡಿ. ಆ ಹಿನ್ನೆಲೆ ಆರು ವರ್ಷ ಅವಧಿ ಪೂರೈಸಿದ ಅಧ್ಯಕ್ಷರಿಗೆ ಮಾಸಿಕ 67,500 ರೂ, ಸದಸ್ಯರಿಗೆ 61,500 ರೂ. ಪಿಂಚಣಿಯನ್ನು ನೀಡಲು ಒಪ್ಪಿಗೆ.
  • ಕಾನೂನು ಮಾಪನ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ. ಮೊದಲಿದ್ದಂತಹ 513 ಹುದ್ದೆ 450ಕ್ಕೆ ಇಳಿಕೆಯಾಗಲಿದ್ದು, 40 ಹೊಸ ಹುದ್ದೆ ಸೃಷ್ಟಿಯಾಗಲಿದೆ. 93 ಹುದ್ದೆಗಳು ರದ್ದಾಗುತ್ತಿವೆ.
  • ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆಗೆ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ 29.14 ಕೋಟಿ ರೂ. ಯೋಜನೆ.
  • ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 2.17 ಎಕರೆಯಲ್ಲಿ ಪ್ರಯಾ ಣಿಕರ ತಂಗುದಾಣ 67.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
  • ಲೋಕಾಯುಕ್ತ ಸಂಸ್ಥೆಯಲ್ಲಿ ಅಪರನಿಬಂಧಕರು (ವಿಚಾರಣೆಗಳು) ಹುದ್ದೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮೂವರು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರುಗಳ ಸೇವೆ ಇನ್ನೊಂದು ವರ್ಷದ ಅವಧಿಗೆ ಮುಂದುವರಿಕೆ.

ನೀರಾವರಿ ಪಂಪ್​ಸೆಟ್ ಸಕ್ರಮಕ್ಕೆ ಬ್ರೇಕ್

ಇನ್ಮುಂದೆ ನೀರಾವರಿಗೆ ಅಕ್ರಮವಾಗಿ ಐಪಿ ಸೆಟ್ ಅಳವಡಿಸುವುದಕ್ಕೆ ಸರ್ಕಾರ ಬ್ರೇಕ್ ಹಾಕಿದೆ. 2015ರಿಂದ ಈ ವರೆಗೂ ಅಕ್ರಮ ಐಪಿ ಸೆಟ್​ಗಳನ್ನು ಸಕ್ರಮ ಮಾಡಿರುವುದಕ್ಕೆ ಸಂಪುಟ ಘಟನೋತ್ತರ ಅನುಮತಿ ನೀಡುವ ಜತೆಗೆ ಇನ್ನು ಮುಂದೆ ಸಕ್ರಮ ಮಾಡುವುದಿಲ್ಲ ಎಂದು ಘೋಷಿಸಿದೆ. ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಎಚ್ ಕೆ ಪಾಟೀಲ, ಕಳೆದ ಎಂಟು ವರ್ಷಗಳಲ್ಲಿ 2 ಲಕ್ಷದಷ್ಟು ಅಕ್ರಮ ಪಂಪ್​ಗಳನ್ನು ಸಕ್ರಮಗೊಳಿಸಲಾಗಿದೆ. ಇದಕ್ಕಾಗಿ ಎಸ್ಕಾಂಗಳು 6999 ಕೋಟಿ ರೂ. ವೆಚ್ಚ ಮಾಡಿದೆ. ರೈತರ ಹಿತದೃಷ್ಟಿಯಿಂದ ಈ ಅನುಕೂಲತೆ ಕಲ್ಪಿಸಿದ್ದು, ಸೆ.22ಕ್ಕೆ ಕಟ್ ಆಫ್ ಡೇಟ್ ನಿಗದಿಯಾಗಿದೆ. ಇನ್ಮುಂದೆ ಸಕ್ರಮ ಮಾಡುವುದಿಲ್ಲ. ಈಗಾಗಲೆ ಅರ್ಜಿ ಸಲ್ಲಿಸಿದ, ಶುಲ್ಕ ಪಾವತಿಸಿದ ಮತ್ತಿತರ ಮಾನದಂಡಗಳಡಿ ಸಕ್ರಮ ಗೊಳಿಸಲಾಗುತ್ತದೆ ಎಂದು ವಿವರಿಸಿದರು.

ಸೌರೀಕರಣಕ್ಕೆ ಪ್ರೋತ್ಸಾಹ: ಸೌರಶಕ್ತಿ ಚಾಲಿತ ನೀರಾವರಿ ಪಂಪ್​ಸೆಟ್​ಗಳನ್ನು ಅಳವಡಿಸಿಕೊಳ್ಳಲು ಮುಂದೆ ಬರುವ ರೈತರಿಗೆ ಪ್ರೋತ್ಸಾಹಿಸಲು ಸರ್ಕಾರ ತೀರ್ವನಿಸಿದೆ. ವೈಯಕ್ತಿಕ ಸೌರಶಕ್ತಿ ಚಾಲಿತ ನೀರಾವರಿ ಪಂಪ್​ಸೆಟ್ ಅಳವಡಿಸುವುದಕ್ಕೆ ಕೇಂದ್ರ ಸರ್ಕಾರದ ಪಿಎಂ ಕುಸುಮ್ ಬಿ ಯೋಜನೆಯಡಿ ನೆರವು ಒದಗಿಸಲಾಗುತ್ತದೆ. ಪ್ರತಿ ಸೌರಶಕ್ತಿ ಚಾಲಿತ ಪಂಪ್​ಸೆಟ್​ಗೆ ತಗಲುವ ವೆಚ್ಚದಲ್ಲಿ ಶೇ.50ರಷ್ಟು ಸಹಾಯಧನ ರಾಜ್ಯ ಸರ್ಕಾರ ಭರಿಸಲಿದೆ. ಶೇ.20ರಷ್ಟು ಬಂಡವಾಳವನ್ನು ಫಲಾನುಭವಿ ರೈತ ಭರಿಸಬೇಕು. ಬಾಕಿ ಶೇ.30 ಅನ್ನು ಕೇಂದ್ರ ಸರ್ಕಾರ ತುಂಬಿಕೊಡಲಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net