

ಪಟ್ನಾ: ಮದುವೆ ಮನೆಯಲ್ಲಿ ಆಹಾರ ಸೇವಿಸಿದ ಪರಿಣಾಮ 60ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯ ಲಹ್ರಿ ಗ್ರಾಮದಲ್ಲಿ ನಡೆದಿದೆ.
ಅಸ್ವಸ್ಥಗೊಂಡಿರುವ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಆರು ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಮನೀಶ್ ಕುಮಾರ್ ಲಹ್ರಿ ಗ್ರಾಮದಲ್ಲಿ ಬೆಳಗಿನ ಜಾವ 4 ಘಂಟೆ ಸುಮಾರಿಗೆ ನಡೆದ ಮದುವೆ ಸಮಾರಂಭ ಒಂದರಲ್ಲಿ ಮಕ್ಕಳು ಅನ್ನ ಹಾಗೂ ಚಿಕನ್ಅನ್ನು ಸೇವಿಸಿದ್ದಾರೆ.
ಇದಾದ ಕೆಲ ಹೊತ್ತಿನ ಬಳಿಕ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ವಾಂತಿ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಲಹ್ರಿ ಗ್ರಾಮಕ್ಕೆ ವೈದ್ಯರ ತಂಡವೊಂದು ಭೇಟಿ ನೀಡಿ ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ವೈದ್ಯರ ತಂಡವು ಮದುವೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಡುಗೆ ಮಾಡಿದಲ್ಲಿ ಹೆಚ್ಚು ಸುಚಿತ್ವ ಕಾಪಾಡಿಕೊಳ್ಳದ ಕಾರಣ ಘಟನೆ ಸಂಭವಿಸಿದೆ ಎಂದು ವೈದ್ಯ ಮನೀಶ್ ತಿಳಿಸಿದ್ದಾರೆ.