ಕೇರಳದಲ್ಲಿ ಕರೊನಾ ಸಕ್ರಿಯ ಪ್ರಕರಣ ಏರಿಕೆ; ವೈರಸ್​ಗೆ ನಾಲ್ವರು ಬಲಿ: ಆತಂಕ ಪಡಬೇಕಾಗಿಲ್ಲ ಎಂದ ಆರೋಗ್ಯ ಸಚಿವೆ

covid
Published on

ಕೊಚ್ಚಿ: ಕೇರಳದಲ್ಲಿ ಕರೊನಾ ಭೀತಿ ಹೆಚ್ಚುತ್ತಿದ್ದು, ಶನಿವಾರ ನಾಲ್ವರು ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಮತ್ತೊಂದೆಡೆ ಸಕ್ರಿಯ ಪ್ರಕರಣಗಳು 1,324ಕ್ಕೆ ಏರಿಕೆ ಕಂಡಿದ್ದು, ಹೊಸ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ.

ಕೇರಳದಲ್ಲಿ ಪ್ರಸ್ತುತ 1,324 ಜನರು ಕೋವಿಡ್ ಪಾಸಿಟಿವ್ ಆದ್ದಾರೆ. ಇದು ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣ ಹೊಂದಿದ ರಾಜ್ಯವಾಗಿದೆ. ಪ್ರತಿದಿನ 700ರಿಂದ 1,000 ಮಂದಿಗೆ ಕರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚಿನ ಪರೀಕ್ಷಾ ದರವನ್ನೂ ಕೇರಳ ಹೊಂದಿದೆ. ಶನಿವಾರ ದೇಶಾದ್ಯಂತ 312 ಕರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 280 ಕೇರಳದಲ್ಲೇ ಪತ್ತೆಯಾಗಿವೆ. ರಾಜ್ಯದಲ್ಲಿ ಜೆಎನ್-1 ಉಪತಳಿ ಪತ್ತೆಯಾಗಿದೆ. ಆದರೆ ಈ ಹಂತದಲ್ಲಿ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ. ಈ ರೂಪಾಂತರಿ ಪ್ರಸ್ತುತ ಅಮೆರಿಕ ಮತ್ತು ಚೀನಾದಲ್ಲಿ ಹೆಚ್ಚಾಗಿ ಹರಡುತ್ತಿದೆ. ಈಗ ಭಾರತಕ್ಕೂ ಕಾಲಿಟ್ಟಿದೆ. ಕೇರಳದಲ್ಲಿ ಪತ್ತೆಯಾಗಿರುವ ಪ್ರಕರಣವನ್ನು ಅಧ್ಯಯನ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಪ್ರಸ್ತುತ ಕೇರಳಲ್ಲಿ ಪತ್ತೆಯಾಗುತ್ತಿರುವ ಹೆಚ್ಚಿನ ಪ್ರಕರಣಗಳಲ್ಲಿ ಸೌಮ್ಯ ಲಕ್ಷಣ ಕಂಡುಬಂದಿದೆ.

ಕರ್ನಾಟಕದಲ್ಲಿ ಮುನ್ನೆಚ್ಚರಿಕೆ: ಕರೊನಾ ತಡೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಕರೊನಾ ರೂಪಾಂತರಿ ಜೆಎನ್.1 ಪತ್ತೆಯಾಗಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಕೊಡಗಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆ ಜಿಲ್ಲೆಯ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೋವಿಡ್ ಟೆಸ್ಟ್ ಮರು ಆರಂಭಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ತಿಳಿಸಿದ್ದಾರೆ.

ಕಣ್ಣೂರಿನ ಪನೂರಿನಲ್ಲಿ ನಿರ್ಬಂಧ: ಕರೊನಾ ಸೋಂಕಿನಿಂದ 80 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಕಾರಣ ಕಣ್ಣೂರು ಸಮೀಪದ ಪಾನೂರು ಪುರಸಭೆ ವ್ಯಾಪ್ತಿಯಲ್ಲಿ ನಿರ್ಬಂಧ ಕ್ರಮ ಘೋಷಣೆ ಮಾಡ ಲಾಗಿದೆ. ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಜೆಎನ್-1 ಸೋಂಕಿತೆ ಗುಣಮುಖ: ಡಿ. 8ರಂದು ತಿರುವನಂತಪುರಂ ಜಿಲ್ಲೆಯ ಕರಕುಲಂನಿಂದ ಸಂಗ್ರಹಿಸಲಾಗಿದ್ದ ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಜೆಎನ್-1 ರೂಪಾಂತರಿ ಪತ್ತೆಯಾಗಿತ್ತು. 79 ವರ್ಷದ ಮಹಿಳೆ ಜ್ವರದ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಮಹಿಳೆ ಈಗ ಸಂಪೂರ್ಣ ಚೇತರಿಕೆ ಕಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net