ನಮ್ಮ ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ; ‘ಡಿಕೆಶಿ’ ಕೈ ಎತ್ತಿ ಹಿಡಿದ ಸಿಎಂ ಸಿದ್ದರಾಮಯ್ಯ| cm-dcm

cm
Published on

ಮೈಸೂರು: ನಾನು ಹಾಗೂ ಡಿ ಕೆ ಶಿವಕುಮಾರ್ ಇಬ್ಬರೂ ಕೂಡ ಚೆನ್ನಾಗಿಯೇ ಇದ್ದೇವೆ. ನಮ್ಮ ಸರ್ಕಾರ 5 ವರ್ಷ ಬಂಡೆಯ ರೀತಿ ಭದ್ರವಾಗಿ ಇರುತ್ತದೆ. ನನ್ನ ಹಾಗೂ ಶಿವಕುಮಾರ್ ನಡುವೆ ಯಾರೇ ತಂದು ಹಾಕುವ ಪ್ರಯತ್ನ ಮಾಡಿದರೂ ಪ್ರಯೋಜನವಿಲ್ಲ. ನಾವಿಬ್ಬರೂ ಒಗ್ಗಟ್ಟಾಗಿ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಆರ್​ಎಸ್ ಗೆ ಬಾಗಿನ ಅರ್ಪಿಸುವ ಹಿನ್ನೆಲೆ ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ನಾವಿಬ್ಬರು ಒಟ್ಟಾಗಿಯೇ ಇದ್ದೇವೆ ಎಂದು ಡಿ.ಕೆ‌ ಶಿವಕುಮಾರ್ ಕೈ ಹಿಡಿದು ಮೇಲೆತ್ತಿ ನಾವು ಚೆನ್ನಾಗಿದ್ದೇವೆ ಎಂದು ಹೇಳಿದರು. ಇನ್ನೂ ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಚುನಾವಣೆ ಸೋತಿದ್ದಾನೆ ಹೇಳಿ ಎಂದು ಪ್ರಶ್ನಿಸಿದರು. ಪಾರ್ಲಿಮೆಂಟ್‌ನಲ್ಲೂ ಸೋತ, ವಿಧಾನ ಸಭೆಯಲ್ಲೂ ಸೋತ, ಅವರೇನು ಭವಿಷ್ಯ ಹೇಳೋದು ಎಂದು ತಿರುಗೇಟು ನೀಡಿದರು.

ಇಂದು (30) ಮೈಸೂರಿನಲ್ಲಿ ಡಿಕೆಶಿ ಕೈಹಿಡಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ, ಅವರು ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಕಾಂಗ್ರೆಸ್ ಶಾಸಕರ ಕಷ್ಟ ಸುಖ ಕೇಳುತ್ತಾರೆ. ಪಕ್ಷ ಸಂಘಟನೆಯ ಬಗ್ಗೆ ಸಲಹೆ ಕೊಡುತ್ತಾರೆ‌. ಅದು ಅವರ ಕೆಲಸ, ಇದರಲ್ಲಿ ಬೇರೆ ಏನು ವಿಶೇಷ ಇಲ್ಲ, ಸುರ್ಜೆವಾಲಾ ಅವರು ಅವರು ಅಭಿಪ್ರಾಯ ಕೇಳಿ, ಅವರ ಕೆಲಸವನ್ನು ಮಾಡುತ್ತಾರೆ ಎಂದರು.

ದಸರಾ ಉದ್ಘಾಟನೆ ನೀವು ಮಾಡಲ್ಲ ಎಂದು ಬಿಜೆಪಿ ಹೇಳುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಿಜೆಪಿಯವರು ಬರೀ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ನಾನೂ ಇವನು ಚೆನ್ನಾಗೆ ಇದ್ದೇವೆ, ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಅದೇ ಸತ್ಯ ಎಂದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net