

ಹೆಬ್ರಿ: ತುಳುನಾಡಿನ ಮಣ್ಣಿಗೆ ವಿಶೇಷ ಶಕ್ತಿ ಇದೆ. ನಮ್ಮ ನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿ. ನಾಗಾರಾಧನೆ, ದೈವಾರಾಧನೆ ಸಹಿತ ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ತನ್ನದೇ ಹಿನ್ನೆಲೆ ಇದೆ. ಪರಿಸರ ಸಂರಕ್ಷಣೆ ಜತೆಗೆ ಹಿಂದು ಧರ್ಮದ ಉನ್ನತಿಗೆ ಶ್ರಮಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಎಣ್ಣೆಹೊಳೆ ಹೇಳಿದರು.
ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಶನಿವಾರ ಗುರುನಾರಾಯಣ ಸ್ವಾಮಿ ಸೇವಾ ಸಂಘ, ವಿವಿಧ ಸಂಘಟನೆ ಸಹಯೋಗದೊಂದಿಗೆ ನಡೆದ ಲೋಕಕಲ್ಯಾಣಾರ್ಥ ಸಾರ್ವಜನಿಕ ಶ್ರೀ ಶನಿಪೂಜೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಧ್ಯಕ್ಷ ಮಂಜುನಾಥ್ ಟಿ. ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ್ ಭಟ್ ಅಜೆಕಾರು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮುನಿಯಾಲು ಬಂಟರ ಸಂಘ ಅಧ್ಯಕ್ಷ ಸತೀಶ್ ಶೆಟ್ಟಿ ಮುಟ್ಲುಪಾಡಿ, ಗುರುನಾರಾಯಣ ಸೇವಾ ಸಂಘ ಗೌರವಾಧ್ಯಕ್ಷ ಎಸ್.ಟಿ.ಕುಂದರ್, ಉದ್ಯಮಿ ವರಂಗ ಸಂತೋಷ್ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಹಿಂದು ಹೆಲ್ಪ್‌ಲೈನ್ ಮುನಿಯಾಲು ಗೌರವಾಧ್ಯಕ್ಷ ಡಾ.ಸುದರ್ಶನ್ ಹೆಬ್ಬಾರ್, ವರಂಗ ಗ್ರಾಪಂ ಅಧ್ಯಕ್ಷ ಸಂತೋಷ್ ಅಮೀನ್, ಮಾತಿಬೆಟ್ಟು ಸಂಪಿಗೆಬಾಕ್ಯಾರು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಮೊಕ್ತೇಸರ ಶಾಂತಿರಾಜ್ ಜೈನ್, ನಾರಾಯಣಗುರು ಸೇವಾ ಸಂಘ ಸ್ಥಾಪಕ ಅಧ್ಯಕ್ಷ ಆನಂದ ಪೂಜಾರಿ ಉಪಸ್ಥಿತರಿದ್ದರು. ಗುರುನಾರಾಯಣ ಸೇವಾ ಸಂಘ ಕಾರ್ಯದರ್ಶಿ ರತ್ನಾಕರ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪೂಜಾರಿ ವಂದಿಸಿದರು.