ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸಮರ್ಪಕ, ಸಮಗ್ರವಾಗಿ ಮಾರಿಯಮ್ಮನ ಕ್ಷೇತ್ರ ನಿರ್ಮಾಣವಾಗಿದೆ. ಈ ಕ್ಷೇತ್ರದಿಂದ ನಾಡಿನ ಜನರಿಗೆ ಪ್ರತಿಯೊಂದು ವಿಷಯದಲ್ಲಿ ಆಶ್ರಯದ ಕೇಂದ್ರವಾಗಲಿ. ಸಂಪತ್ತು ಸದ್ವಿನಿಯೋಗಕ್ಕೆ ವೇದಿಕೆಯಾಗಲಿ ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹರಸಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ 7ನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ದೇಶ ಮೂಲ ವೈಭವನ್ನು ಪಡಕ್ಕೊಳ್ಳುವಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದೆ. ಕಾಪು ಅಮ್ಮನ ಗದ್ದುಗೆ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವವೂ ವೈಭವಪೂರ್ಣವಾದಂತಹ ಸಂಸ್ಕೃತಿಗೆ ಸಿಗುತ್ತಿರುವಂತಹ ಸ್ಥಾನಮಾನದ ಸಂಕೇತ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಕಂಗನಾ ರಾಣವತ್, ಶಾಸಕರಾದ ಡಾ. ಧನಂಜಯ ಸರ್ಜಿ, ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ರಮಾನಾಥ್ ರೈ, ಪ್ರಮೋದ್ ಮಧ್ವರಾಜ್, ಕಾಪು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಕ್ರಂ ಕಾಪು, ವಕೀಲ ಮಹೇಶ್ ಕೋಟ್ಯಾನ್, ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಾಧವ ಆರ್ ಪಾಲನ್, ಪ್ರೇಮನಾಥ್ ಶೆಟ್ಟಿ ದುಬೈ, ಸುಂದರ್ ಶೆಟ್ಟಿ ಅಬುದಾಬಿ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪಕಳ, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದವರಿಂದ ಶಿವ ಮಹಿಮೆ ಕಿರು ನಾಟಕ, ಗಾನ ನೃತ್ಯ ಅಕಾಡೆಮಿ ಮಂಗಳೂರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದರಿಂದ ನೃತ್ಯ ಸಂಗಮ, ಮಂಗಳೂರು ಶ್ರೀ ಲಲಿತೆ ತಂಡದವರಿಂದ ಶನಿ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು.
