80 ವರ್ಷದ ಈ ವ್ಯಕ್ತಿ 80 ಪೊರ್ಶೆ ಕಾರುಗಳ ಮಾಲೀಕ! ಕಾರಿಗಾಗೇ ದೊಡ್ಡ ಬಿಲ್ಡಿಂಗ್​ ಕಟ್ಟಿದ ಭೂಪ!

car
Published on

ವಿಯೆನ್ನಾ: ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಅನೇಕರು ಹೇಳುತ್ತಾರೆ. ಆದರೆ ಅದರಂತೆ ಬದುಕುವವರು ಮಾತ್ರ ಎಲ್ಲೋ ಕೆಲವರು. ಆಸ್ಟ್ರಿಯಾದ ಈ ವ್ಯಕ್ತಿ ವಯಸ್ಸನ್ನು ಕೇವಲ ಸಂಖ್ಯೆಯಾಗಿ ಪರಿಗಣಿಸಿದವರಲ್ಲಿ ಒಬ್ಬರು. ಇದೀಗ 80 ವರ್ಷ ಪೂರೈಸಿರುವ ಈ ವ್ಯಕ್ತಿಯ ಖರೀದಿಸಿರೋದು ಬರೋಬ್ಬರಿ 80 ಪೊರ್ಶೆ ಕಾರು!

ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಒಟ್ಟೊಕರ್ ಈ ರೀತಿಯ ವಿಶೇಷ ಜೀವನವನ್ನು ಬದುಕುತ್ತಿರುವ ವ್ಯಕ್ತಿ. ಒಟ್ಟೊಕರ್​ 30 ವರ್ಷದವರಿದ್ದಾಗ, ಅವರ ಮನೆಯ ಹಿಂಭಾಗದಲ್ಲಿ ಪೊರ್ಶೆ ಕಾರೊಂದು ವೇಗವಾಗಿ ಹೋಯಿತಂತೆ. ಅದನ್ನು ಕಂಡ ಅವರಿಗೆ ದೇಹದಲ್ಲಿ ಸಂಚಲನವಾದಂತಾಗಿದೆ. ತಾನೂ ಪೊರ್ಶೆ ಕಾರನ್ನು ಖರೀದಿಸಬೇಕೆಂಬ ಆಸೆ ಹುಟ್ಟಿದೆ. ಅದಾದ ನಂತರ ಹಣ ಕೂಡಿಟ್ಟ ಅವರು, ಪೊರ್ಶೆ 911ಇ ಕಾರನ್ನು ಕೊಂಡಿದ್ದಾರೆ.

ಮೊದಲನೇ ಕಾರನ್ನು ಕೊಂಡ ನಂತರ ಅವರ ಕಾರಿನ ಹುಚ್ಚು ಹೆಚ್ಚಾಗಿದ್ದು, ಪೊರ್ಶೆ 917, 910, 904, 956 ಹೀಗೆ ಹಲವು ಕಾರಗಳನ್ನು ಖರೀದಿಸುತ್ತಾ ಹೋಗಿದ್ದಾರೆ. ಈ ವರ್ಷ ಅವರಿಗೆ 80 ವರ್ಷ ತುಂಬಿದ್ದು, ಆ ಸಮಯಕ್ಕೆ ತಮ್ಮ 80ನೇ ಪೊರ್ಶೆ ಕಾರನ್ನು ಕೊಂಡಿದ್ದಾರೆ. ನೀಲಿ ಬಣ್ಣದ ಪೊರ್ಶೆ ಕಾರನ್ನು ಕೊಳ್ಳುವ ಮೂಲಕ ಸರಣಿಯನ್ನು ಪೂರ್ತಿಗೊಳಿಸಿದ್ದಾರೆ. ಸದ್ಯ ಅವರ ಬಳಿ 38 ಪೊರ್ಶೆ ಕಾರುಗಳಿವೆ.

ಕಾರುಗಳನ್ನು ಹೆಚ್ಚಿಸುತ್ತಾ ಹೋದಂತೆ, ಅವುಗಳನ್ನು ನಿಲ್ಲಿಸುವುದಕ್ಕೆ ಬೇಕಾದ ಜಾಗವೂ ಹೆಚ್ಚಾಗುತ್ತಾ ಹೋಗಿದೆ. ಕಾರುಗಳನ್ನು ನಿಲ್ಲಿಸಲೆಂದೇ ಬಿಲ್ಡಿಂಗ್​ ಒಂದನ್ನು ಒಟ್ಟೊಕರ್​ ನಿರ್ಮಿಸಿಕೊಂಡಿದ್ದಾರೆ. ದೊಡ್ಡ ಕಾರ್ಖಾನೆಯಂತಿರುವ ಬಿಲ್ಡಿಂಗ್​ನಲ್ಲಿ ಸಾಲುಗಟ್ಟಿ ಪೊರ್ಶೆ ಕಾರನ್ನು ನಿಲ್ಲಿಸಿದ್ದಾರೆ. ನಾನು ತಿಂಗಳು ಪೂರ್ತಿ ದಿನಕ್ಕೆ ಒಂದು ಕಾರನ್ನು ಬಳಸಬಹುದು ಎನ್ನುವ ಸಂತೋಷ ನನಗಿದೆ ಎನ್ನುತ್ತಾರೆ ಒಟ್ಟೊಕರ್​. 80ರ ಹರೆಯದಲ್ಲೂ ಕಾರನ್ನು ಅತ್ಯಂತ ವೇಗವಾಗೊ ಓಡಿಸುವುದೆಂದರೆ ಅವರಿಗೆ ಪಂಚಪ್ರಾಣವಂತೆ.

ಪೊರ್ಶೆ ಕಾರೊಂದರ ಬೆಲೆ ಸುಮಾರು 70-80 ಲಕ್ಷ ರೂಪಾಯಿ. 80 ಕಾರುಗಳ ಒಡೆಯ ಒಟ್ಟೊಕರ್​ ಕಾರಿಗಾಗಿ ಎಷ್ಟು ಖರ್ಚು ಮಾಡಿರಬಹುದು ಎನ್ನುವುದುನ್ನು ಒಮ್ಮೆ ಲೆಕ್ಕ ಹಾಕಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net