

ಲಾಹೋರ್: ಜೂನ್ 02ರಂದು ಆರಂಭಗೊಂಡ ಚುಟುಕು ವಿಶ್ವ ಸಮರದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಇದು ಅಲ್ಲಿನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೂ ವಿವಾದಗಳಿಗೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ.
ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಹೀನಾಯವಾಗಿ ಸೋಲುತ್ತಿರುವುದು. ಅದು ಕೂಡ ಐರ್ಲೆಂಡ್, ಯುಎಸ್ಎನಂತಹ ತಂಡಗಳ ವಿರುದ್ಧ ಎಂಬುದು ಪಾಕ್ಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಇದರ ನಡುವೆ ಆಟಗಾರರ ಕಳಪೆ ಫಾರ್ಮ್ ತಂಡದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ಮುಖ್ಯವಾಗಿ ಅಜಂ ಖಾನ್ ಅವರ ಆಟದ ವೈಖರಿ ತಂಡದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್, ನಾನು ನೋಡಿದ ಪ್ರಕಾರ ಅಜಂ ಖಾನ್ ತರಬೇತಿ ಶಿಬಿರವನ್ನು ಕೂಡಿಕೊಂಡು ಆರು ವಾರಗಳು ಕಳೆದರೂ ಅವರ ದೇಹದಲ್ಲಿನ ಕೊಬ್ಬಿನ ಅಂಶ ಹಾಗೆ ಇರುತ್ತದೆ. ಯಾವುದೇ ಬದಲಾವಣೆಯಾಗುವುದಿಲ್ಲ. ಇಡೀ ತಂಡ 10 ನಿಮಿಷಗಳಲ್ಲಿ ಎರಡು ಕಿಲೋಮೀಟರ್ ಕ್ರಮಿಸಿದರೆ ಅಜಂ ಖಾನ್ ದುಪ್ಪಟ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ.
ಅತಿಯಾಗಿ ತೂಕ ಹೊಂದಿರುವುದು ನನ್ನ ಪ್ರಕಾರ ಸಮಸ್ಯೆಯಲ್ಲ. ಆದರೆ, ನೀವು ಆಟದ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಫಿಟ್‌ನೆಸ್ ಅನ್ನು ಅಗತ್ಯವಿರುವ ಮಟ್ಟಕ್ಕೆ ಸುಧಾರಿಬೇಕಾಗುತ್ತದೆ. ನಾವು ಅವರಿಗೆ ಫಿಟ್ನೆಸ್ ಚಾರ್ಟ್ಅನ್ನು ನೀಡಿದ್ದೇವೆ. ಆದರೆ, ಅವರು ಅದನ್ನು ಫಾಲೋ ಮಾಡಲು ಸಾಧ್ಯವಾಗದೆ ಉಳಿದಿದ್ದಾರೆ. ನಿಮ್ಮ ಪ್ರತಿಭೆಯಿಂದಾಗಿ ನೀವು ತಂಡದಲ್ಲಿದ್ದೀರಿ, ಆದರೆ ಫಿಟ್‌ನೆಸ್ ಆಧಾರದ ಮೇಲೆ ನಾವು ರಾಜಿ ಮಾಡಿಕೊಂಡಿರುವ ಉದಾಹರಣೆಯೇ ಇಲ್ಲ ಎಂದು ಮಾಜಿ ನಾಯಕ ಮೊಹಮ್ಮದ್ ಹಫೀಜ್ ಹೇಳಿದ್ದಾರೆ