ಅವರೇಳಿದಂತೆ ಬಾಲ ಅಲ್ಲಾಡಿಸಲು ಇಲ್ಯಾವ ನಾಯಿನೂ ಇಲ್ಲ; ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ

India vs Pakistan
Published on

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ ಟೂರ್ನಿಯು ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಏಕೆಂದರೆ ಈ ಬಾರಿಯ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿರುವುದರಿಂದ ಭದ್ರತೆಯ ಕಾರಣದಿಂದಾಗಿ ಭಾರತ ತಂಡ ಭಾಗವಹಿಸುವುಡು ಡೌಟ್​ ಎಂದು ಹೇಳಲಾಗಿದ್ದು, ಬಿಸಿಸಿಐ ಹೈಬ್ರಿಡ್​ ಮಾದರಿಯಲ್ಲಿ ಪಂದ್ಯಗಳನ್ನು ನಡೆಸುವಂತೆ ಐಸಿಸಿಗೆ ಮನವಿ ಮಾಡಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ (PCB) ಭಾರತ ಪಾಕಿಸ್ತಾನದ ನೆಲದಲ್ಲಿ ಆಡಲೇಬೇಕು ಎಂದು ಆಗ್ರಹಿಸಿದೆ.

2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿ  ಪಾಕಿಸ್ತಾನ ಹಾಗೂ ಭಾರತ ನಡುವಿನ ಕಿತ್ತಾಟಕ್ಕೆ ಹೆಚ್ಚು ಸೌಂಡ್​ ಮಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ನೀಡುತ್ತಿರುವ ಹೇಳಿಕೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಬಸಿತ್​ ಅಲಿ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ವಿರುದ್ಧ ಗುಡುಗಿದ್ದು, ನೀವು ಹೇಳಿದಂತೆ ಬಾಲ ಅಲ್ಲಾಡಿಸಲು ಇಲ್ಲಿ ಯಾವ ನಾಯಿಗಳಿಲ್ಲ ಎಂದು ಹೇಳಿದ್ದಾರೆ.

Basit Ali

ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಈ ಕುರಿತು ಮಾತನಾಡಿರುವ ಬಸಿತ್​ ಅಲಿ, 5-6 ಕ್ರಿಕೆಟ್​ ಮಂಡಳಿಗಳು ಜಯ್​ ಷಾ ಹೇಳಿದಂತೆ ನಾಯಿಗಳ ತರಹ ಬಾಲವನ್ನು ಅಲ್ಲಾಡಿಸುತ್ತವೆ. ಆದರೆ, ಅವರೇಳಿದಂತೆ ಬಾಲ ಅಲ್ಲಾಡಿಸಲು ಇಲ್ಯಾವ ನಾಯಿನೂ ಇಲ್ಲ. ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಬಾರದು ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಐಸಿಸಿಗೆ ಸ್ಪಷ್ಟವಾಗಿ ತಿಳಿಸಬೇಕು. ಭಾರತವು ನಮ್ಮ ದೇಶದಲ್ಲಿ ಆಡಲು ಸಿದ್ಧರಿಲ್ಲದಿದ್ದರೆ, ನಾವು ಬೇರೆ ದೇಶದಲ್ಲಿ ಟೂರ್ನಿ ಆಡಲು ಒಪ್ಪಿಕೊಳ್ಳಬಾರದು. ಐಸಿಸಿಗೆ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಮಾಜಿ ನಾಯಕ ಬಸಿತ್​ ಅಲಿ ಆಗ್ರಹಿಸಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ಇತ್ತೀಚಿಗೆ ಕೊಲಂಬೊದಲ್ಲಿ ಮುಕ್ತಾಯಗೊಂಡ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್​ ಟ್ರೋಫಿ ವಿಚಾರವಾಗಿಯೂ ಮಾತುಕತೆ ನಡೆದಿದ್ದು, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ತನ್ನ ನಿರ್ಧಾರವನ್ನು ತಿಳಿಸಿದ್ದು, ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈವೆಂಟ್​ ವೇಳಾಪಟ್ಟಿ ಹಾಗೂ ಬಜೆಟ್​ಅನ್ನು ಪಿಸಿಬಿ ಸಲ್ಲಿಸಿದ್ದು, ಭಾರತದ ಪಂದ್ಯಗಳನ್ನು ಲಾಹೋರ್​ನಲ್ಲಿ ನಡೆಸುವುದಾಗಿ ತಿಳಿಸಿದೆ. ಈ ಬಗ್ಗೆ ಐಸಿಸಿ ಚರ್ಚಿಸಿ ಆ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net