ಆಸ್ಕರ್​ ವೇದಿಕೆಯಲ್ಲಿ ನಗೆಪಾಟಲಿಗೀಡಾದ ಟ್ರಂಪ್​! ಕಾರಣ ಇದೇ ನೋಡಿ?

trump
Published on

ವಾಷಿಂಗ್ಟನ್​: ಆಸ್ಕರ್ ಅವಾರ್ಡ್ಸ್ 2024 ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ನಗೆಪಾಟಲಿಗೀಡಾದರು. ಈ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ ಅದಕ್ಕೆ ಪ್ರತಿಕ್ರಿಯೆ ಬಂದಿತು.

ಸಮಾರಂಭದ ಕುರಿತು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟ್ರೂತ್' ನಲ್ಲಿ ಸುದೀರ್ಘ ಪೋಸ್ಟ್ ಮಾಡಿ, ಇದರಲ್ಲಿ ನಿರೂಪಕ ಜಿಮ್ಮಿಯನ್ನು ಟೀಕಿಸಿದ್ದರು. ಸಂಭ್ರಮಾಚರಣೆ ನಡೆಯುತ್ತಿರುವಾಗಲೇ ಈ ವಿಷಯ ಜಿಮ್ಮಿ ಗಮನಕ್ಕೆ ಬಂದಿದೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲೇ ಪ್ರೇಕ್ಷಕರನ್ನು ಉದ್ದೇಶಿಸಿ ಜಿಮ್ಮಿ ಮಾತನಾಡುವಾಗ, ಟ್ರಂಪ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್, ಅವರನ್ನು ಹೆಸರಿಸದೆ, ಪೋಸ್ಟ್​ ಅನ್ನು ಓದುತ್ತ, "ಆಸ್ಕರ್‌ನಲ್ಲಿ ಜಿಮ್ಮಿಗಿಂತ ಕೆಟ್ಟ ಹೋಸ್ಟ್ ಇಲ್ಲ. ಸಾಧಾರಣಕ್ಕಿಂತ ಕಡಿಮೆ ವ್ಯಕ್ತಿ ಅಸಾಧ್ಯವಾದುದನ್ನು ಮಾಡಲು ಪ್ರಯತ್ನಿಸುತ್ತಿದ್ದಾನೆ. ಅದು ಎಂದಿಗೂ ಆಗುವುದಿಲ್ಲ. ಮೊದಲು ಅವನನ್ನು ವಜಾಗೊಳಿಸಿ ಮತ್ತು ಅವನ ಬದಲಿಗೆ ಇನ್ನೂ ಕಡಿಮೆ ಹಣಕ್ಕೆ ಬರುವ ಯಾರನ್ನಾದರೂ ನೇಮಿಸಿ, ಆತ ವೇದಿಕೆಯನ್ನು ಸಮರ್ಥವಾಗಿ ಮುನ್ನಡೆಸಬಹುದು.. "ಬ್ಲಾ, ಬ್ಲಾ, ಬ್ಲಾ," ಎಂದು ಬರೆದುಕೊಂಡಿದ್ದಾರೆ ಎಂದು ಹೇಳಿದರು.

ಇನ್ನು ಇದಕ್ಕೆ ಕಿಮ್ಮೆಲ್ ಪ್ರತಿಕ್ರಿಯಿಸಿದ್ದು, ನೀವು ಟ್ರೂತ್ ಸೋಶಿಯಲ್‌ ಮೀಡಿಯಾದಲ್ಲಿ ಯಾವ ಮಾಜಿ ಅಧ್ಯಕ್ಷ ಆ ಪೋಸ್ಟ್ ಅನ್ನು ಬರೆದಿದ್ದಾರೆ ಎಂದು ಊಹಿಸಬಹುದು ಎಂದು ಅತಿಥಿಗಳಿಗೆ ಹೇಳಿದರು. ಅಷ್ಟೇ ಅಲ್ಲ, ಕಾರ್ಯಕ್ರಮವನ್ನು ವೀಕ್ಷಿಸಿದ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದರು. ಬಳಿಕ "ನಿನ್ನ ಜೈಲು ಶಿಕ್ಷೆ ಇನ್ನೂ ಮುಗಿದಿಲ್ಲವೇ..?" ಎಂದು ವ್ಯಂಗ್ಯವಾಗಿ ಕೇಳಿದರು. ಇದಕ್ಕೆ ಸಭಿಕರು 'ಗೊಳ್​' ಎಂದು ನಕ್ಕರು.

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಈಗಾಗಲೇ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವುದು ಗೊತ್ತೇ ಇದೆ. ಅವರಿಗೆ ಸಂಬಂಧಿಸಿದ ತನಿಖೆಗಳೂ ವೇಗವಾಗಿ ನಡೆಯುತ್ತಿವೆ. ಮತ್ತೊಂದೆಡೆ, ಟ್ರಂಪ್ 2024 ರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net