ಉತ್ತರ ಕನ್ನಡದಲ್ಲಿ ಮಳೆ ಆರ್ಭಟ! ರಾಜ್ಯದ ಐದು ಜಿಲ್ಲೆಗಳಿಗೆ ಆರೆಂಜ್ ಆಲರ್ಟ್​ ಘೋಷಣೆ

ವಿಜಯವಾಣಿ - 2024-07-05T101933.678
Published on

ಉತ್ತರ ಕನ್ನಡ: ನಿನ್ನೆ (ಜು.04) ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಾರವಾರ, ಶಿರಸಿ ಸೇರಿದಂತೆ ಕೆಲವು ನಗರ ಪ್ರದೇಶಗಳು ಜಲಾವೃತಗೊಂಡಿವೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆಯ ಪರಿಸ್ಥಿತಿ ಉಂಟಾಗಿದೆ.‌ ಇನ್ನು ಉಡುಪಿ ಜಿಲ್ಲೆಯ ಮೂರು ತಾಲೂಕುಗಳಿಗೆ ರಜೆ ಘೋಷಿಸಲಾಗಿದ್ದು, ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಕೊಡಲಾಗಿದೆ. ಪದವಿ, ಐಟಿಐ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಜೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇವತ್ತು ಸಹ ಉತ್ತರ ಕನ್ನಡದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕುಮಟಾ, ಭಟ್ಕಳ, ಹೊನ್ನಾವರ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶ ಹೊರಡಿಸಿದ್ದಾರೆ. ಇಂದು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮೈಸೂರು, ಮಂಡ್ಯ, ಕೋಲಾರ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾದ್ಯತೆಗಳು ಹೆಚ್ಚಿವೆ ಎಂದು ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

ಇನ್ನು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಈ ಹಿನ್ನೆಲೆ ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಗಾಳಿ, ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಕೊಡಗಿಗೆ ಯೆಲ್ಲೋ ಅಲರ್ಟ್‌ ಘೋಷಿಸಿರುವ ಹವಾಮಾನ ಇಲಾಖೆ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net