

ಬೈಂದೂರು: ಕಸ್ತೂರಿರಂಗನ್ ವರದಿ ಅನುಷ್ಠಾನ, ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಆತಂಕದಲ್ಲಿರುವ ಜಡ್ಕಲ್, ಮುದೂರು ಗ್ರಾಮಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಚರ್ಚೆ ನಡೆಸಿದರು.
ಬಳಿಕ ಶಾಸಕ ಗಂಟಿಹೊಳೆ ಮಾತನಾಡಿ, ಮೀಸಲು ಅರಣ್ಯ, ಬಫರ್‌ಜೋನ್ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆಗಳಿಗೆ ಭಯಗೊಂಡಿರುವ ಜಡ್ಕಲ್, ಮುದೂರು ಗ್ರಾಮದ ಜನರು ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಜತೆಗೆ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ಮುಟ್ಟಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಮೊದಲ ಹೋರಾಟಕ್ಕೆ ಮುನ್ನುಡಿ ಬರೆದಂತಾಗಿದೆ. ಈ ಪ್ರತಿಭಟನೆ ಕಿಚ್ಚು ಇಡೀ ಉಡುಪಿ ಜಿಲ್ಲೆಗೆ ಪಸರಿಸಿ ಒಂದು ಜನಂದೋಲನವಾಗಿ ಪರಿವರ್ತನೆಗೊಂಡಾಗ ನಮ್ಮ ಹೋರಾಟಕ್ಕೆ ನಿಶ್ಚಿತವಾಗಿ ಫಲ ದೊರೆಯಲಿದೆ ಎಂದರು.
ಪರಿಸರಸೂಕ್ಷ್ಮ ಪ್ರದೇಶ ಜನವಸತಿ ಪ್ರದೇಶದಿಂದ ಹೊರಗಿರಬೇಕು. ಕಾಡಿನ ಒಳಗೆ ಹಲವಾರು ವರ್ಷದಿಂದ ವಾಸವಾಗಿರುವ ಕುಟುಂಬಕ್ಕೆ, ಕೃಷಿ ಜಾಗಕ್ಕೆ ಸರಿಯಾದ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಬೇಡಿಕೆಯಿಟ್ಟರು.