ವಿಪಕ್ಷಗಳ ಒಗ್ಗಟ್ಟಿನ ಕಹಳೆ: ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ; ಇಂದು ನಿರ್ಣಯ

Congress (3)
ಬೆಂಗಳೂರಿಗೆ ಆಗಮಿಸಿದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತತ್ವದಲ್ಲಿ ‘ನಾವೆಲ್ಲ ಒಂದಾಗಿ ನಿಲ್ಲುತ್ತೇವೆ’ ಎಂಬ ಘೋಷವಾಕ್ಯದಡಿ ಬೆಂಗಳೂರಿನಲ್ಲಿ ನಡೆದಿರುವ ವಿಪಕ್ಷಗಳ ಮಹಾಘಟಬಂಧನ್ ಸಭೆ ಮಂಗಳವಾರ ಮಹತ್ವದ ನಿರ್ಣಯ ಕೈಗೊಳ್ಳಲಿದೆ.

ಸೋಮವಾರ ಮಧ್ಯಾಹ್ನ 23 ಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲರನ್ನೂ ಆದರದಿಂದ ಬರಮಾಡಿಕೊಂಡರು. ರಾತ್ರಿ ವಿಶೇಷ ಭೋಜನ ಕೂಟವೂ ನಡೆಯಿತು. ಮಂಗಳವಾರದ ಸಭೆಯ ಅಜೆಂಡಾ ಕುರಿತು ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಯ ಕುರಿತು ಅನೌಪಚಾರಿಕ ಚರ್ಚೆ ಕೂಡ ನಡೆಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿಗಳನ್ನು ಅಸ್ತ್ರವಾಗಿ ಬಳಸುತ್ತಿದೆ. ರಾಹುಲ್ ಗಾಂಧಿ ಅವರ ಅನರ್ಹತೆ, ಮಹಾರಾಷ್ಟ್ರದ ಬೆಳವಣಿಗೆ ಇದಕ್ಕೆ ಸಾಕ್ಷಿ ಎಂದರು.

ಮಣಿಪುರ ಕಳೆದ 75 ದಿನಗಳಿಂದ ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿ ಒಂದೇ ಒಂದು ಮಾತನಾಡಿಲ್ಲ. ಇದು ಆಘಾತಕಾರಿ ಬೆಳವಣಿಗೆ. ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಸಭೆ ಇದು.

ದೇಶದ ಜನ ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪಟನಾ ಸಭೆ ನಂತರ ಎಲ್ಲಾ ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಬಲ್ಲೆವು ಎಂದು ಬೀಗುತ್ತಿದ್ದವರು ಈಗ ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಮೊದಲ ಯಶಸ್ಸಾಗಿದೆ. ಈ ಸಭೆ ರಾಷ್ಟ್ರ ರಾಜಕಾರಣದಲ್ಲಿ ಗೇಮ್ ಚೆಂಜರ್ ಆಗಲಿದೆ ಎಂದರು.

ಪಟನಾ ಸಭೆ ನಂತರ ಪ್ರಧಾನಿಯವರಿಗೆ ಎನ್​ಡಿಎ ಮೈತ್ರಿಕೂಟ ನೆನಪಾಗಿದೆ. ಅವರು ಮಂಗಳವಾರ ಎನ್​ಡಿಎ ಸಭೆ ಕರೆದಿದ್ದಾರೆ. ಆ ಮೈತ್ರಿಕೂಟಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಲಾಗುವುದು ಎಂದು ಈಗ ಹೇಳಲು ಸಾಧ್ಯವಿಲ್ಲ. ಇಲ್ಲಿ ಕೇವಲ ಕಾಂಗ್ರೆಸ್ ತೀರ್ಮಾನ ಮಾತ್ರವಲ್ಲ. ಎಲ್ಲ ಪಕ್ಷಗಳೂ ಸೇರಿ ತೀರ್ಮಾನ ಮಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದರು.

ಭವಿಷ್ಯದ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಗಳೆಲ್ಲರಿಗೂ ಹೃತ್ಪೂರ್ವಕ ಸ್ವಾಗತ. ‘ನಾವೆಲ್ಲ ಒಂದಾಗುತ್ತೇವೆ, ಒಂದಾಗಿ ಮುಗ್ಗರಿಸುತ್ತೇವೆ’ ಎಂದು ಬೆಂಗಳೂರಿಗೆ ಬರುತ್ತಿದ್ದಾರೆ. | ಬಿ.ವೈ.ವಿಜಯೇಂದ್ರ, ಬಿಜೆಪಿ ನಾಯಕ

40ಕ್ಕೂ ಹೆಚ್ಚು ನಾಯಕರು: ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಪಂಜಾಬ್ ಸಿಎಂ ಭಗವಂತ ಮಾನ್, ವಿವಿಧ ರಾಜ್ಯಗಳ ಮಾಜಿ ಸಿಎಂಗಳಾದ ಉದ್ದವ್ ಠಾಕ್ರೆ, ಅಖಿಲೇಶ್ ಯಾದವ್, ಲಾಲೂ ಪ್ರಸಾದ್ ಯಾದವ್, ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ ಅಲ್ಲದೆ, ಸೀತಾರಾಂ ಯೆಚೂರಿ, ಡಿ.ರಾಜಾ, ಸುಪ್ರಿಯಾ ಸುಳೆ, ಸಂಜಯ್ ರಾವತ್, ಆದಿತ್ಯ ಠಾಕ್ರೆ ಸೇರಿದಂತೆ ಹಲ ನಾಯಕರು ಉಪಸ್ಥಿತರಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷಗಳ ನಾಯಕರನ್ನು ಸ್ವಾಗತಿಸಿದರು.

ಖಾದ್ಯಗಳ ರಸದೂಟ: ನಾಯಕರಿಗೆ ಬಗೆಬಗೆಯ ತಿನಿಸುಗಳಿದ್ದವು. ದಕ್ಷಿಣ ಭಾರತ, ಉತ್ತರ ಭಾರತದ ಖಾದ್ಯಗಳ ಜೊತೆ ಈಶಾನ್ಯ ಭಾರತದ ಆಹಾರದ ಏರ್ಪಾಡು ಮಾಡಲಾಗಿತ್ತು. ಉತ್ತರ ಭಾರತದ ರೋಟಿ, ನಾನ್, ತೊಗರಿ ಬೇಳೆಯ ದಾಲ್, ಹೆಸರು, ಅಲಸಂದೆಯ ಪಂಜಾಬಿ ತಡ್ಕಾ, ಚಿಕನ್, ಮಟನ್ ತಂದೂರಿ, ಅಲೂಫ್ರೈ, ಪನ್ನೀರ್ ಟಿಕ್ಕ, ಪನ್ನೀರ್ ಮಸಾಲಾ, ಮಟನ್ ಮಸಾಲಾ, ಚಿಕನ್ ಮಸಾಲಾ, ಕಾಶ್ಮೀರಿ ತಂದೂರಿ, ವೆಜ್, ಚಿಕನ್ ನೂಡಲ್ಸ್, ಮೂರು ಬಗೆಯ ಸೂಪ್, ಹೈದ್ರಾಬಾದ್ ಬಿರಿಯಾನಿ, ಈಶಾನ್ಯ ರಾಜ್ಯಗಳ ಚಿಕನ್ ಮಸಾಲಾ ಫ್ರೈ, ಪಂಜಾಬ್, ಗುಜರಾತ್, ಬಂಗಾಳದ ಸಿಹಿ ತಿನಿಸುಗಳು.

ಸೋನಿಯಾ ಭೇಟಿ ಮಾಡಿದ ಖಾದರ್: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದರು. ಸಚಿವ ಜಿ. ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಎಂ.ಬಿ ಪಾಟೀಲ್, ಎಚ್.ಕೆ ಪಾಟೀಲ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಬಿ.ಕೆ ಹರಿಪ್ರಸಾದ್ ಸೇರಿ ಹಲವು ನಾಯಕರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದರು.

ಸಭೆಯ ವಿವರ

  • ಬೆಳಗ್ಗೆ 11 ಗಂಟೆಗೆ ಸಭೆಯಲ್ಲಿ ಪ್ರಸ್ತಾವಿಕ ಭಾಷಣ
  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಮುಖ್ಯ ಭಾಷಣ
  • 11.20ಕ್ಕೆ ಸಭೆಯಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ
  • ಸಭೆಯ ಅಜೆಂಡಾಗಳ ಬಗ್ಗೆ ಸುದೀರ್ಘ ಮಾತುಕತೆ
  • ಮಧ್ಯಾಹ್ನ ಒಂದು ಗಂಟೆಗೆ ಊಟದ ವಿರಾಮ
  • ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ
  • ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ಮಾಡುವುದು
  • ಸಂಜೆ 3 ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯ
  • ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ
  • ಮೈತ್ರಿಕೂಟದ ಪ್ರಮುಖ ನಾಯಕರಿಂದ ಸುದ್ದಿಗೋಷ್ಠಿ
  • ಸುದ್ದಿಗೋಷ್ಠಿಯಲ್ಲಿ ಮೈತ್ರಿಕೂಟದ ಸಭೆಯ ನಿರ್ಣಯಗಳ ಬಗ್ಗೆ ಘೊಷಣೆ

ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಲಾಗಿದೆ. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ. ಮುಂದೆ ಮೋದಿಯವರಿಗೆ ಸ್ಪಷ್ಟವಾದ ಬಹುಮತ ದೊರೆಯಲು ಸಾಧ್ಯವಿಲ್ಲ. | ಸಿದ್ದರಾಮಯ್ಯ ಮುಖ್ಯಮಂತ್ರಿ ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. | ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಯಾವ ಪುರುಷಾರ್ಥಕ್ಕಾಗಿ ಮಹಾಘಟಬಂಧನ್ ಕರೆದಿದ್ದಾರೆಂದು ಹೇಳಲಿ. ಅಧಿಕಾರಕ್ಕಾಗಿ ಮಹಾ ಘಟಬಂಧನ್ ಮಾಡುತ್ತಿದ್ದಾರೆ. ನಾನು ತಾಜ್ ವೆಸ್ಟೆಂಡ್​ನಲ್ಲಿ ಇದ್ದರೆ ಮಹಾನ್ ಅಪರಾಧ. ಅವರು ಮಾಡಿದರೆ ತಪ್ಪಲ್ಲ. | ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನಾಯಕ

ಜೆಡಿಎಸ್ ವಿರುದ್ಧ ಸಿಡಿಮಿಡಿ: ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನಿಷ್ಠುರ ಧೋರಣೆ ತಾಳಿರುವುದು ಅವರ ಮಾತುಗಳಲ್ಲೇ ಸ್ಪಷ್ಟವಾಯಿತು. ಜಾತ್ಯತೀತ ಪರವಾದ, ಸರ್ಕಾರದ ವಿರುದ್ಧ ಹೋರಾಡುವ ಎಲ್ಲಾ ಪಕ್ಷಗಳು ನಮ್ಮ ಜತೆಗಿರುತ್ತಾರೆಂದು ಕೆ.ಸಿ.ವೇಣುಗೋಪಾಲ್ ಹೇಳಿದರು. ಈ ಸರ್ಕಾರದ ವಿರುದ್ಧ ಹೋರಾಡುವ ಧೈರ್ಯ ಇರುವವರು ನಮ್ಮ ಜತೆ ಬರುತ್ತಾರೆ. ಅವರಿಗೆ ಆಹ್ವಾನ ಅಗತ್ಯವಿಲ್ಲ ಎಂದು ಹೇಳಿದರು.

ಕಾರ್ಯಸೂಚಿ ಏನು?

  • ಜು.26 ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ
  • ಜು. 20ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ತಂತ್ರಗಾರಿಕೆ ರೂಪಿಸಲಾಗುವುದು.
  • ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಮಣಿಸಲು ಮೂಲಕ ಲೋಕಸಭೆ ಚುನಾವಣೆವರೆಗೂ ಜನಾಭಿಪ್ರಾಯ ರೂಪಿಸುವುದು.

ಪಕ್ಷಗಳ ಸಂಖ್ಯೆ ಹೆಚ್ಚಳ: ದು ಒಂದು ಪಕ್ಷದ ಮೈತ್ರಿ ಅಲ್ಲ. ಪಟನಾ ಸಭೆಯಲ್ಲಿ 24 ಪಕ್ಷಗಳು ಭಾಗವಹಿಸಿದ್ದು, ಬೆಂಗಳೂರಿನ ಸಭೆಗೆ 26 ಪಕ್ಷಗಳು ಭಾಗವಹಿಸಲಿವೆ. ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಜೈರಾಮ್ ರಮೇಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net