More

  ಕಿವಿ ಇದ್ದೂ ಕಿವುಡು, ಕಣ್ಣಿದ್ದೂ ಕುರುಡನಂತೆ; ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ತೀವ್ರ ವಾಗ್ದಾಳಿ

  ಬೆಳಗಾವಿ: ಕಾಂಗ್ರೆಸ್ ಸರ್ಕಾರ ಕಿವಿ ಇದ್ದೂ ಕಿವುಡನಂತೆ, ಕಣ್ಣಿದ್ದರೂ ಕುರುಡನಂತೆ. ಐದಾರು ತಿಂಗಳಿನಿಂದಲೂ ನುಡಿದಂತೆ ನಡೆಯುತ್ತಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ ಎಂದು ಶಾಸಕ ಬಿ.ವೈ. ವಿಜಯೇಂದ್ರ ತಿವಿದರು.

  ವಿಧಾನಸಭೆಯಲ್ಲಿ ಬುಧವಾರ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯಲ್ಲಿ ಮಾತನಾಡಿ, ಬರದಿಂದ ರೈತರು ಎದುರಿಸುತ್ತಿರುವ ಸಮಸ್ಯೆ, ನನೆಗುದಿಗೆ ಬಿದ್ದ ನೀರಾವರಿ ಯೋಜನೆ, ವಿದ್ಯುತ್ ಅಭಾವ ಹೀಗೆ ವಿವಿಧ ವಿಚಾರ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.

  ಬಿಜೆಪಿ ಸರ್ಕಾರ ಈ ಭಾಗದಲ್ಲಿ ಚಾಲನೆ ನೀಡಿದ್ದ ವಿವಿಧ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಈ ಯೋಜನೆಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದ ಕೈ ನಾಯಕರು ತಮ್ಮದೇ ಸರ್ಕಾರವಿದ್ದರೂ ನೀರಾವರಿಗೆ ಏಕೆ ಹಣ ನೀಡಲಿಲ್ಲ? ಎಂದು ರೈತರಿಗೆ ಉತ್ತರ ನೀಡಬೇಕು ಎಂದರು.ವಿದ್ಯುತ್ ಅಭಾವದಿಂದ ಜನತೆ ಪರಿತಪಿಸುತ್ತಿದ್ದಾರೆ. ರೈತರಿಂದ ಸಾಲ ವಸೂಲಿ ಮಾಡಲಾಗುತ್ತಿದ್ದು, ವಸೂಲಿ ನಿಲ್ಲಿಸಲು ಸೂಚಿಸಬೇಕು. ಬರ ನಿರ್ವಹಣೆಗೆ ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಮೊದಲು ತನ್ನ ಪಾಲಿನ ನಿಧಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

  ಸರ್ಕಾರ ಪಶು ಆಹಾರ ದರ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಬೆಳೆ ನಷ್ಟ, ಸಾಲ ವಸೂಲಿ ಒತ್ತಡದಿಂದ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ರಾಜ್ಯಕ್ಕೆ ಪ್ರತಿ ನಿತ್ಯ ಸರಾಸರಿ 16 ಸಾವಿರ ಮೆಗಾವಾಟ್ ವಿದ್ಯುತ್ ಅವಶ್ಯಕತೆ ಇದ್ದು, ಸದ್ಯ 10-11 ಸಾವಿರ ಮೆಗಾವಾಟ್ ಅಷ್ಟೇ ಉತ್ಪಾದನೆಯಾಗುತ್ತಿದೆ. ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಕುಟುಕಿದರು. ರೈತರ ಪಂಪ್​ಸೆಟ್ ಅಕ್ರಮ ಸಕ್ರಮ ಮಾಡುವ ತೀರ್ವನದಿಂದ ಹಿಂದೆ ಸರಿದ ಸರ್ಕಾರ, ರೈತರೇ ಮೂಲಸೌಲಭ್ಯ ಕಲ್ಪಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ 2-2.25 ಲಕ್ಷ ರೂ. ಹೊರೆ ಬೀಳಲಿದೆ ಎಂದರು.

  ಕಲ್ಯಾಣ, ಕಿತ್ತೂರು ಕರ್ನಾಟಕದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಘೋಷಿಸಬೇಕು. ದ್ರಾಕ್ಷಿ ಬೆಳೆಗಾರರಿಗೂ ನೆರವಾಗಬೇಕು ಎಂದು ಆಗ್ರಹಿಸಿದ ಅವರು, ಬರದಿಂದ ಸಂಕಷ್ಟಕ್ಕೀಡಾದ ರೈತರ ಸಾಲಮನ್ನಾ ಮಾಡಿ, ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

  ಸರ್ಕಾರ ಬದುಕಿದೆಯೋ? ಸತ್ತಿದೆಯೋ?: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರ ವಿರುದ್ಧ ವಾಕ್​ಪ್ರಹಾರ ನಡೆಸಿದರು. ನಿಲುವಳಿ ಸೂಚನೆ ಮಂಡಿಸಿದ ಅವರು, ಸರ್ಕಾರ ಬಂದ ಮೇಲೆ 43 ಸಾವಿರ ಪ್ರಕರಣ ದಾಖಲಾಗಿದೆ. ಡಕಾಯಿತಿ, ದರೋಡೆ, ಕೊಲೆ ಪ್ರಕರಣ ಹೆಚ್ಚಾಗಿವೆ. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಹಲ್ಲೆಯಾಯಿತು, ಪೊಲೀಸರೇ ಧರಣಿ ನಡೆಸಿದರು. ಭದ್ರಾವತಿ, ಬೆಳಗಾವಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಯಿತು. ಶಿವಮೊಗ್ಗದಲ್ಲಿ ಟಿಪು್ಪ ಮತ್ತಿತರರ ಕಟೌಟ್​ನಿಂದ ಗಲಾಟೆಯಾಯಿತು ಎಂದರು. ಕಾನೂನು ಸುವ್ಯವಸ್ಥೆ ವಿಷಯ ನಿಲುವಳಿ ಸೂಚನೆ ವ್ಯಾಪ್ತಿಗೆ ಬಾರದಿರುವುದರಿಂದ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸ್ಪೀಕರ್ ಪ್ರತಿಪಕ್ಷದ ನಾಯಕರ ಮಾತಿಗೆ ಬ್ರೇಕ್ ಹಾಕಿದರು.

  zameer

  ಜಮೀರ್ ಭಾಷಣ ಕೋಲಾಹಲ: ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಮಾಡಿದ ಭಾಷಣವು ವಿಧಾನ ಪರಿಷತ್​ನಲ್ಲಿ ಬುಧವಾರ ಕೋಲಾಹಲ ಎಬ್ಬಿಸಿತು. ಜಮೀರ್ ತಮ್ಮ ನಿಲುವಿಗೆ ಅಂಟಿಕೊಂಡರೆ, ಪ್ರತಿಭಟನಾನಿರತ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಜೆಡಿಎಸ್ ಕೂಡ ಸಾಥ್ ನೀಡಿತು.

  ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಜಮೀರ್ ಉತ್ತರಿಸಲು ಮುಂದಾಗುತ್ತಿದ್ದಂತೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ತೇಜಸ್ವಿನಿಗೌಡ ವಿರೋಧಿಸಿದರು. ವಿಧಾನಸಭಾಧ್ಯಕ್ಷರ ಪೀಠ ಹಾಗೂ ಸಂವಿಧಾನಕ್ಕೆ ಅಗೌರವ ತೋರಿದವರಿಗೆ ಉತ್ತರಿಸಲು ಅವಕಾಶ ನೀಡುವುದಿಲ್ಲ ಎಂದಾಗ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್, ಅಬ್ದುಲ್ ಜಬ್ಬರ್, ಸೀತಾರಾಂ ಇನ್ನಿತರರು ಆಕ್ಷೇಪಿಸಿದರು. ಮಧ್ಯೆ ಪ್ರವೇಶಿಸಿದ ಸಭಾನಾಯಕ ಎನ್.ಎಸ್.ಬೋಸರಾಜು, ಕೆಳಮನೆ ಸದಸ್ಯರಾದ ಜಮೀರ್ ಅವರಿಗೂ ಮೇಲ್ಮನೆ ಸಭಾಪತಿ ಪೀಠಕ್ಕೂ ಸಂಬಂಧವಿಲ್ಲವೆಂದು ತಳ್ಳಿಹಾಕಿದರು.

  ಆದರೂ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆಯಂತೆ ಜಮೀರ್, ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿಲ್ಲ. ಅಂತಹ ಕೆಲಸ ಮಾಡುವುದೂ ಇಲ್ಲವೆಂದು ಸ್ಪಷ್ಟಪಡಿಸಿದರು.

  ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಸಮಾನ ಅಧಿಕಾರ ನೀಡುತ್ತದೆ. ಕರ್ನಾಟಕದಲ್ಲಿ ವಿಧಾನಸಭೆ ಸ್ಪೀಕರ್​ರಂತಹ ಉನ್ನತ ಹುದ್ದೆ ನೀಡಿದ್ದನ್ನು ಉದಾಹರಿಸಿದ್ದು, ಸದನಕ್ಕೆ ತಪು್ಪ ಮಾಹಿತಿ ನೀಡಬಾರದು ಎಂದು ವಾದಿಸಿದರು. ಸಚಿವರು ಸ್ಪಷ್ಟನೆ ನೀಡಿರುವ ಕಾರಣ ಚರ್ಚೆಗೆ ಅವಕಾಶ ಬೇಡವೆಂದು ಸಲೀಂ ಅಹಮದ್ ವಾದಿಸಿದರೆ, ಆಡಳಿತ, ಪ್ರತಿಪಕ್ಷಗಳ ಸದಸ್ಯರು ವಾಗ್ವಾದಕ್ಕೆ ಇಳಿದ ಕಾರಣ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.

  ಮತ್ತೆ ಸದನ ಸೇರಿದಾಗ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದವು. ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಅಭಿಪ್ರಾಯ, ಸ್ಪಷ್ಟೀಕರಣ ವ್ಯಕ್ತವಾಗಿವೆ. ಸಾಕಷ್ಟು ವಿಷಯಗಳು ಚರ್ಚೆಯಾಗಬೇಕಾಗಿದ್ದು, ಅವಕಾಶ ನೀಡಬೇಕು ಎಂದು ಕೋರಿದರು. ಈ ಸದನಕ್ಕೆ ಸಂಬಂಧಪಡದ ವಿಷಯದಲ್ಲಿ ಸಭಾಪತಿ ವಿವೇಚನಾಧಿಕಾರ ಬಳಸಿ ಪ್ರತಿಪಕ್ಷದವರ ಅಭಿಪ್ರಾಯ, ಸಚಿವರ ಹೇಳಿಕೆಗೆ ಅವಕಾಶ ಕೊಟ್ಟಿರುವೆ ಎಂದು ಹೇಳಿದ ನಂತರವೂ ಬಿಜೆಪಿ ಪಟ್ಟು ಬಿಡಲಿಲ್ಲ. ಇದರಿಂದಾಗಿ ಮತ್ತೆ ಗದ್ದಲ ಮರುಕಳಿಸಿತು. ಪರಿಸ್ಥಿತಿ ತಿಳಿಗೊಳಿಸಲು ಸಭಾಪತಿ ಮತ್ತೆ ಐದು ನಿಮಿಷ ಕಲಾಪ ಮುಂದೂಡಿದರು.

  ಉತ್ತರ ಕರ್ನಾಟಕದವರು ಮಲತಾಯಿ ಮಕ್ಕಳೇ?: ಕರ್ನಾಟಕ ಹಲವು ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಈ ಬಗ್ಗೆ ಹೆಮ್ಮೆಯ ನಡುವೆಯೂ ಉತ್ತರ ಕರ್ನಾಟಕದ ಸ್ಥಿತಿ ನೋಡಿ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಉದ್ಯಮ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಈ ಭಾಗವನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಬೇಸರ ಹೊರಹಾಕಿದರು.

  ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ವಿಚಾರ ಮಂಡಿಸಿದ ಅವರು, ಅಂಕಿ-ಅಂಶಗಳನ್ನು ಬಿಡಿಸಿಟ್ಟರು. ಜಿಲ್ಲಾವಾರು ತಲಾದಾಯ ಪಟ್ಟಿಯ ಮುಂಚೂಣಿಯಲ್ಲಿ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗಳಿಲ್ಲ. ಬೆಂಗಳೂರಿನ ಸರಾಸರಿ ತಲಾದಾಯ 6.21 ಲಕ್ಷ ರೂ. ಇದ್ದರೆ, ಕಲಬುರಗಿಯದ್ದು 1.24 ಲಕ್ಷ ರೂ. ಮಾತ್ರ ಇದೆ. ಬೀದರ್, ಬೆಳಗಾವಿ, ಯಾದಗಿರಿ ಸ್ಥಿತಿಯೂ ಅದೇ ರೀತಿ ಇದೆ ಎಂದರು. ಅತೀ ಹೆಚ್ಚು ಎಂಎಲ್​ಎ, ಎಂಪಿಗಳನ್ನು ಉತ್ತರ ಕರ್ನಾಟಕ ಭಾಗದಿಂದ ಆರಿಸಿ ಕಳಿಸಲಾಗುತ್ತದೆ. ಈವರೆಗಿನ ಮುಖ್ಯಮಂತ್ರಿಗಳಲ್ಲಿ ಹೆಚ್ಚಿನವರು ದಕ್ಷಿಣದವರೇ ಆಗಿದ್ದಾರೆ. ಅಪೌಷ್ಟಿಕತೆಯಲ್ಲಿ ನಾವೇ ಟಾಪ್. ಶೈಕ್ಷಣಿಕ ಫಲಿತಾಂಶದಲ್ಲಿ ನಾವೇ ಕೊನೇ. ಇದೆಲ್ಲ ನೋಡಿದರೆ ಹೊಟ್ಟೆಯಲ್ಲಿ ಸಂಕಟ ಆಗುತ್ತದೆ. ಉತ್ತರ ಕರ್ನಾಟಕದವರು ಮಲತಾಯಿ ಮಕ್ಕಳೇ ಎಂದು ಸರ್ಕಾರವನ್ನು ತಿವಿದರು.

  ಮಾಸಾಂತ್ಯಕ್ಕೆ ಬೆಳೆ ವಿಮೆ ಪಾವತಿ: ರೈತರಿಗೆ ಬೆಳೆ ವಿಮೆ ಪರಿಹಾರ ಹಣವನ್ನು ಡಿಸೆಂಬರ್ ಅಂತ್ಯದಲ್ಲಿ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗಾರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯ ಪರಿಷ್ಕೃತ ಮಾರ್ಗಸೂಚಿ ಅನ್ವಯ ಜಿಲ್ಲಾ ಮಟ್ಟದ ಜಂಟಿ ಸಮಿತಿಯು ಸಮೀಕ್ಷೆ ಕೈಗೊಂಡಿದ್ದು, ಅದರ ಅನ್ವಯ ಬೆಳೆ ವಿಮೆ ಪರಿಹಾರ ಮೊತ್ತ ಇತ್ಯರ್ಥ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಮಾರ್ಗಸೂಚಿ ಪರಿಷ್ಕರಣೆ ಆಗಬೇಕೆಂದು ನಾವು ಒತ್ತಾಯ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆಗೆ ಒಪು್ಪತ್ತಿಲ್ಲ ಎಂದು ಹೇಳಿದರು.

  ವೃಂದ ನೇಮಕ, ನಿಯಮ ಪರಿಷ್ಕರಣೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೃಂದ ಮತ್ತು ನೇಮಕ ನಿಯಮಗಳ ಪರಿಷ್ಕರಣೆ ಪ್ರಗತಿಯಲ್ಲಿದೆ ಎಂದು ಸಚಿವ ಜಮೀರ್ ಅಹ್ಮದ್ ಮಾಹಿತಿ ನೀಡಿದ್ದಾರೆ. ಮೇಲ್ಮನೆಯಲ್ಲಿ ಬಿಜೆಪಿಯ ಹೇಮಲತಾ ನಾಯಕ ಪ್ರಶ್ನೆಗೆ ಉತ್ತರಿಸಿ, ಎಫ್​ಡಿಸಿಎ, ಶಿಕ್ಷಕರು, ಉಪನ್ಯಾಸಕರು ಒಳಗೊಂಡು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಮುಂಬಡ್ತಿ ಒಳಗೊಂಡು ಪ್ರಸ್ತುತ ಚಾಲ್ತಿಯಲ್ಲಿರುವ 2011ರ ಸಿ ಆಂಡ್ ಆರ್ ರೂಲ್ಸ್​ಗಳನ್ನು ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  ಫಲಾನುಭವಿ ವಂತಿಗೆ ಕಡಿತಕ್ಕೆ ಪ್ರಸ್ತಾವನೆ: ಕೊಳಚೆ ಪ್ರದೇಶದಲ್ಲಿ ಮನೆಗಳ ನಿರ್ವಣಕ್ಕೆ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ವಂತಿಗೆಯನ್ನು 4.50 ಲಕ್ಷ ರೂ.ನಿಂದ 1 ಲಕ್ಷ ರೂ.ಗೆ ಇಳಿಸುವ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಬುಧವಾರ ಪ್ರಕಟಿಸಿದರು. ಮೇಲ್ಮನೆಯಲ್ಲಿ ಕಾಂಗ್ರೆಸ್​ನ ಕೆ.ಅಬ್ದುಲ್ ಜಬ್ಬರ್ ಪ್ರಶ್ನೆಗೆ ಉತ್ತರಿಸಿ, ಹಾಲಿ ಯೋಜನೆಯಡಿ ಮನೆ ನಿರ್ಮಾಣ ವೆಚ್ಚ 7.50 ಲಕ್ಷ ರೂ.ಗಳಾಗಲಿದೆ. ಕೇಂದ್ರ ಸರ್ಕಾರ 1.50 ಲಕ್ಷ ರೂ., ರಾಜ್ಯ 1.20 ಲಕ್ಷ ರೂ. ಸಹಾಯಧನ ನೀಡುತ್ತದೆ. ಪರಿಶಿಷ್ಟ ಜಾತಿ, ಪಂಗಡಗಳ ಫಲಾನುಭವಿಗಳಿಗೆ 2 ಲಕ್ಷ ರೂ. ನೆರವು ಸಿಗುತ್ತದೆ. ಉಳಿದ 4.50 ಲಕ್ಷ ರೂ. ಮೊತ್ತವನ್ನು ಫಲಾನುಭವಿ ಭರಿಸಬೇಕಾಗುತ್ತದೆ. ಹೊರೆಯಾಗುತ್ತದೆ ಎಂದು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಂತಿಗೆ ಇಳಿಸಿ, ಉಳಿದ ಮೊತ್ತವನ್ನು ಸರ್ಕಾರವೇ ಭರಿಸುವ ಪ್ರಸ್ತಾವನೆಗೆ ಅನುಮೋದನೆ ಕೋರಿ ಸಚಿವ ಸಂಪುಟ ಸಭೆ ಮುಂದಿಡ ಲಾಗುವುದು ಎಂದು ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts