ನವದೆಹಲಿ: ಭಯೋತ್ಪಾದಕರ ಗುಂಡಿನ ದಾಳಿಗೆ ದೇಶದ ಭದ್ರತಾ ಸಿಬ್ಬಂದಿ ಬಲಿಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ಜಿ-20 ಶೃಂಗಸಭೆ ಯಶಸ್ಸಿನ ಸಂಭ್ರಮಾಚರಣೆ ಮಾಡಿರುವುದಕ್ಕೆ ಕಾಂಗ್ರೆಸ್ ಮತ್ತು ಮತ್ತಿತರ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮೃತ ಯೋಧರ ಕುಟುಂಬದವರ ಆಕ್ರಂದನದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಯೋಧರ ಸಾವಿಗೆ ಸಂತಾಪ ವ್ಯಕ್ತಪಡಿಸಬೇಕಾದ ಮೋದಿ, ತಮ್ಮ ಮೇಲೆ ಹೂವಿನ ಸುರಿಮಳೆ ಮಾಡಿಕೊಂಡು ಸಂಭ್ರಮಿಸಿದ್ದಾರೆ ಎಂದು ಕಿಡಿಕಾರಿದೆ.
ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಗಾರೊಲ್ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ 19ನೇ ರಾಷ್ಟ್ರೀಯ ರೈಫಲ್ ಕಮಾಂಡಿಂಗ್ ಆಫಿಸರ್ ಕರ್ನಲ್ ಮನ್ಪ್ರಿತ್ ಸಿಂಗ್, ವೆುೕಜರ್ ಆಶೀಶ್ ಧೋನಕ್ ಮತ್ತು ಪೊಲೀಸ್ ಡೆಪ್ಯೂಟಿ ಸುಪರಿಡೆಂಟ್ ಹುಮಾಯುನ್ ಭಟ್ ಮೃತಪಟ್ಟಿದ್ದಾರೆ.
‘ಸಂಭ್ರಮಾಚರಣೆ ಮುಂದೂಡಬಹುದಿತ್ತು. ಆದರೆ, ಸಂಭ್ರಮದಲ್ಲಿದ್ದ ಪ್ರಧಾನಿಗೆ ದೇಶದ ಮೂವರು ಯೋಧರು ಹುತಾತ್ಮರಾಗಿರುವುದು ವಿಷಯವಾಗಲೇ ಇಲ್ಲ’ ಎಂದು ಕಾಂಗ್ರೆಸ್ನ
ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೆದಿ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿರುವ ದೃಶ್ಯಗಳನ್ನು ಇಡೀ ದೇಶ ನೋಡಿದೆ ಎಂದಿದ್ದಾರೆ. ಪುಲ್ವಾಮಾ ದಾಳಿ ಸಂದರ್ಭದಲ್ಲಿ ವಿಷಯ ತಡವಾಗಿ ತಿಳಿಯಿತು ಎಂದು ಹೇಳಿದ್ದ ಪ್ರಧಾನಿ, ಈಗ ಯೋಧರ ಸಾವಿನ ವಿಷಯ ಬೆಳಗ್ಗೆಯೇ ತಿಳಿದಿದ್ದರೂ ಸಂಜೆ ಸಂಭ್ರಮಾಚರಣೆ ಮಾಡಿದೆ ಎಂದು ಆರ್ಜೆಡಿಯ ಮನೋಜ್ ಶಾ ಕಿಡಿಕಾರಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಕ್ಷೀಣ
ಇಂದೋರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗುತ್ತಿದ್ದು, ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಬಿಜೆಪಿ ಪರ ರಾಜ್ಯದಲ್ಲಿ ಪ್ರಚಾರ ಕೈಗೊಂಡಿರುವ ಸಚಿವರು, ಬುಧವಾರ ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿಗೆ 3 ಯೋಧರು ಬಲಿಯಾಗಿರುವುದಕ್ಕೆ ಪ್ರತಿಕ್ರಿಯಿಸಿದರು.
ಇತ್ತೀಚಿನ ವರ್ಷಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿದ್ದು, ಭಾರತದ ಆಂತರಿಕ ವಿಷಯಗಳಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸುತ್ತಿರುವುದರಿಂದ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ ಎಂದು ಸಚಿವರು ಹೇಳಿದರು. ಮೂಲಸೌಕರ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಮ್ಮು-ಕಾಶ್ಮೀರ, ದೇಶದ ಇತರೆ ರಾಜ್ಯಗಳಿಗಿಂತ ಭಿನ್ನವಾಗಿದೆ ಎಂಬ ಪ್ರತ್ಯೇಕವಾದಿಗಳ ತಪು್ಪ ಕಲ್ಪನೆಯನ್ನು ನಾವು ತೊಡೆದುಹಾಕಿದ್ದೇವೆ ಎಂದರು.
ಭಾರತದ ಆಂತರಿಕ ವಿಷಯಗಳಲ್ಲಿ ಅನಗತ್ಯವಾಗಿ ಪಾಕ್ ಮಧ್ಯಪ್ರವೇಶಿಸುವುದಕ್ಕೆ ಕಡಿವಾಣ ಬೀಳುತ್ತದೆಯೋ ಆಗ ಇಂತಹ ಕೃತ್ಯಗಳು ಇದ್ದಕ್ಕಿಂದ್ದಂತೆ ಛಿದ್ರಗೊಳ್ಳುತ್ತವೆ ಎಂದು ಸಚಿವರು ಹೇಳಿದರು.
ಯೋಧರು ಹುತಾತ್ಮರಾದರೆ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸುವ ಕಾಂಗ್ರೆಸ್ನವರು, ಅವರ ಅವಧಿಯಲ್ಲಿ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಿದೆ.
| ವಿ.ಕೆ. ಸಿಂಗ್ ಸಚಿವ