ಆನ್​ಲೈನ್ ಔಷಧ ಸೇವೆ ಆಪತ್ತು ಜೀವಕ್ಕೆ ತರುತ್ತೆ ಕುತ್ತು; ಮೆಡಿಕಲ್ ಶಾಪ್​ಗಳ ವಿನಾಶಕ್ಕೆ ಕಾರಣ

vaccine
Published on

ಕೆ.ಎನ್. ರಾಘವೇಂದ್ರ ಮಂಡ್ಯ

ಕರೊನಾ ಲಾಕ್​ಡೌನ್​ನಲ್ಲಿ ಔಷಧ ಕೊರತೆ ನೀಗಿಸುವ ಸಲುವಾಗಿ ಕೇಂದ್ರ ಸರ್ಕಾರ ಆನ್​ಲೈನ್​ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡಿದೆ. ದೇಶವ್ಯಾಪಿ ಆನ್​ಲೈನ್​ನಲ್ಲಿ ಎಗ್ಗಿಲ್ಲದೆ ಔಷಧ ಮಾರಾಟ ನಡೆಯುತ್ತಿದ್ದು, ದುರ್ಬಳಕೆ ಆತಂಕ ಕಾಡುತ್ತಿದೆ. ಮತ್ತೊಂದೆಡೆ ಆನ್​ಲೈನ್ ಮಾರಾಟಕ್ಕೆ ಬೃಹತ್ ಕಂಪನಿಗಳು ಪದಾರ್ಪಣೆ ಮಾಡಿದ್ದು, ದೇಶದ ಮೂಲೆ ಮೂಲೆಗೂ ಔಷಧ ಪೂರೈಕೆ ಮಾಡುತ್ತಿವೆ. ಲಕ್ಷಾಂತರ ಜನರಿಗೆ ಜೀವನ, ನೌಕರಿ ಕಲ್ಪಿಸಿರುವ ಔಷಧ ಅಂಗಡಿ ಉದ್ಯಮಕ್ಕೆ ವಿನಾಶದ ಮುನ್ಸೂಚನೆ ಕಾಣುತ್ತಿದೆ.

ಔಷಧ ಮತ್ತು ಕಾಂತಿವರ್ಧಕ ಕಾಯ್ದೆ 1940 ಮತ್ತು ನಿಯಮಾವಳಿ 1945ರಂತೆ ಔಷಧಗಳ ಬಗ್ಗೆ ಜಾಹೀರಾತು ನೀಡುವಂತಿಲ್ಲ ಹಾಗೂ ಮನೆಗೆ ಸರಬರಾಜು ಮಾಡುವಂತಿಲ್ಲ. ಆದರೆ, 2017ರಲ್ಲಿ ಕಾಯ್ದೆ ತಿದ್ದುಪಡಿ ಮಾಡಿ ಆನ್​ಲೈನ್ ಮೂಲಕ ಔಷಧ ಮಾರಾಟ, ಖರೀದಿಗೆ ಅವಕಾಶ ನೀಡಿದೆ. ಆದರೂ ಮಾರ್ಗಸೂಚಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಈ ನಡುವೆ ಕರೊನಾ ಲಾಕ್​ಡೌನ್​ನಲ್ಲಿ ಕೇಂದ್ರ ಸರ್ಕಾರವೇ ಆನ್​ಲೈನ್​ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡಿದೆ. ಪ್ರಾರಂಭದಲ್ಲಿ 2 ಆನ್​ಲೈನ್ ಸಂಸ್ಥೆಗೆ ಅನುಮತಿ ಕೊಡಲಾಗಿತ್ತು. ಇದೀಗ ಅನೇಕ ಸಂಸ್ಥೆಗಳು ಪರವಾನಗಿ ಪಡೆಯಲು ಮುಂದಾಗಿವೆ. ಈಗಾಗಲೆ 1ಎಂಜಿ, ಫಾಮ್ರ್ ಈಸಿ, ನೆಟ್​ವೆುಡ್ಸ್, ಮೆಡ್​ಲೈಫ್​ನಂತಹ ಸಂಸ್ಥೆಗಳು ಆನ್​ಲೈನ್​ನಲ್ಲಿ ಔಷಧ ಸರಬರಾಜು ಮಾಡುತ್ತಿವೆ. ಇತ್ತೀಚೆಗಷ್ಟೆ ರಿಲಯನ್ಸ್ ಸಂಸ್ಥೆ ನೆಟ್​ವೆುಡ್ಸ್​ನಲ್ಲಿ 620 ಕೋಟಿ ರೂ. ಮೌಲ್ಯದ ಷೇರು ಖರೀದಿಸಿದೆ. ಕಳೆದ ತಿಂಗಳಷ್ಟೆ ಬೆಂಗಳೂರಿನಿಂದ ಅಮೇಜಾನ್ ಔಷಧ ಮಾರಾಟ ಆರಂಭಿಸಿದ್ದು, ಸದ್ಯದಲ್ಲೆ ದೇಶಾದ್ಯಂತ ವಿಸ್ತರಿಸಲು ಮುಂದಾಗುತ್ತಿದೆ. ಇದರಿಂದ ಅನುಕೂಲ ಕ್ಕಿಂತ ಅನನುಕೂಲವೇ ಹೆಚ್ಚು ಎಂಬ ಚರ್ಚೆಗಳು ನಡೆಯುತ್ತಿವೆ.

ಚೀಟಿ ನಕಲಿಯೋ ಅಥವಾ ಅಸಲಿಯೋ?: ಆನ್​ಲೈನ್ ಮಾರಾಟದಿಂದ ಅವಾಂತರ ಸೃಷ್ಟಿಯಾಗಲಿದೆ. ಯುವಜನರು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಕೆಲವೊಂದು ಮಂಪರು ಔಷಧವನ್ನು ಮೆಡಿಕಲ್ ಸ್ಟೋರ್​ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಕೊಡುವುದಿಲ್ಲ. ಆನ್​ಲೈನ್​ನಲ್ಲಿ ವೈದ್ಯರ ಚೀಟಿ ಅಪ್​ಲೋಡ್ ಮಾಡಿದರೆ ಸಾಕು ಔಷಧ ಮನೆ ಬಾಗಿಲಿಗೆ ಬರುತ್ತದೆ. ಈ ರೀತಿ ಸಲ್ಲಿಕೆಯಾಗುವ ಚೀಟಿ ನಕಲಿಯೋ ಅಥವಾ ಅಸಲಿಯೋ ಎಂಬುದು ಹೇಗೆ ತಿಳಿಯುತ್ತದೆ. ಮಂಪರು ಔಷಧ ಖರೀದಿಸಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜತೆಗೆ ಡ್ರಗ್ಸ್ ದಂಧೆಗೂ ರಾಜಮಾರ್ಗವಾಗುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಕೆಲ ವೈದ್ಯರ ಆತಂಕವಾಗಿದೆ.

ಮೆಡಿಕಲ್ ಶಾಪ್​​ಗಳಿಗೆ ಸಂಕಷ್ಟ: ದೇಶದಲ್ಲಿ ಅಂದಾಜು 9 ಲಕ್ಷ, ರಾಜ್ಯದಲ್ಲಿ 50 ಸಾವಿರ ಔಷಧ ವ್ಯಾಪಾರಿಗಳಿದ್ದಾರೆ. ಮೆಡಿಕಲ್ ಸ್ಟೋರ್​ಗಳಲ್ಲಿ ಸಾವಿರಾರು ನೌಕರರು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಆನ್​ಲೈನ್​ನಲ್ಲಿಯೇ ಔಷಧ ಮಾರಾಟವಾದರೆ ಬಂಡವಾಳ ಹೂಡಿದವರು ಮತ್ತು ನೌಕರರ ಜೀವನ ಬೀದಿಗೆ ಬರಲಿದೆ. ಈ ಕಾರಣಕ್ಕೆ ಆನ್​ಲೈನ್​ನಲ್ಲಿ ಔಷಧ ಮಾರಾಟಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.

ಅಖಿಲ ಭಾರತೀಯ ಔಷಧ ಮಾರಾಟಗಾರರ ಸಂಸ್ಥೆಯು ಅಮೇಜಾನ್ ಸಂಸ್ಥೆಗೆ ಪತ್ರ ಬರೆದಿದೆ. ದೇಶದಲ್ಲಿ ಆನ್​ಲೈನ್ ಔಷಧ ಮಾರಾಟ ಮಾಡುವಿಕೆ ಕಾನೂನಿಗೆ ವಿರುದ್ಧವಾಗಿದ್ದು, ಈಗಾಗಲೆ ಅನೇಕ ಕಾನೂನು ವ್ಯಾಜ್ಯದಲ್ಲಿ ಸಿಲುಕಿದೆ. ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದೆ.

ಕರೊನಾ ಸಮಯದಲ್ಲಿ ಹೆಚ್ಚಳ: ಕೆಲ ಸಮಯದಿಂದ ಅಸ್ತಿತ್ವದಲ್ಲಿದ್ದರೂ ಆನ್​ಲೈನ್​ನಲ್ಲಿ ಔಷಧ ಖರೀದಿಗೆ ಪುಷ್ಠಿ ಸಿಕ್ಕಿದ್ದು ಮಹಾಮಾರಿ ಕರೊನಾ ಸಮಯದಲ್ಲೇ. ಮೆಡಿಕಲ್ ಸ್ಟೋರ್​ಗಳಿಗೆ ತೆರಳಿ ಔಷಧ ಖರೀದಿಸುವುದರಿಂದ ಕರೊನಾ ಸೋಂಕು ಹೆಚ್ಚಬಹುದು. ವೈಯಕ್ತಿಕ ಅಂತರ ಪಾಲನೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಹೆಚ್ಚಿನ ಜನರು ಆನ್​ಲೈನ್​ನಲ್ಲಿ ಮೊರೆ ಹೋದರು. ಕೇಂದ್ರ ಸರ್ಕಾರವೂ ಅವಕಾಶ ನೀಡಿತ್ತು. ಸದ್ಯ ದೇಶದ ಫಾರ್ಮ ಮಾರ್ಕೆಟ್​ನಲ್ಲಿ ಆನ್​ಲೈನ್ ಪಾಲು ಕೇವಲ ಶೇ. 3-3.5ರಷ್ಟಿದೆ.

ಆನ್​ಲೈನ್​ನಲ್ಲಿ ಔಷಧ ಮಾರಾಟ ಅಪಾಯಕಾರಿ. ಅನುಮತಿ ರದ್ಧು ಮಾಡಬೇಕೆಂದು ಆ.17ರಂದು ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಪುರಸ್ಕರಿಸುವ ಭರವಸೆ ಇದೆ. | ಬಿ.ಲೋಕೇಶ್ ಜಿಲ್ಲಾಧ್ಯಕ್ಷ ಮಂಡ್ಯ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ https://www.vijayavani.net/homeopathic-drug-given-to-half-of-gujarat-population/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net