

ನವದೆಹಲಿ: ವಿದೇಶಗಳಲ್ಲಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಕರೆತರಲು ಆಪರೇಷನ್ ಸಮುದ್ರ ಸೇತು ಆರಂಭವಾಗಿದೆ. ಈಗಾಗಲೇ ಭಾರತೀಯ ನೌಕಾದಳದ ಐಎನ್ಎ ಜಲಾಶ್ವ ನೌಕೆ ಗುರುವಾರ ಮಾಲ್ಡೀವ್ಸ್ನ ರಾಜಧಾನಿ ಮಾಲೆ ತಲುಪಿದೆ.
ದ್ವೀಪರಾಷ್ಟ್ರದಲ್ಲಿ ಸಂಕಷ್ಟದಲ್ಲಿರುವ ಒಂದು ಸಾವಿರಕ್ಕೂ ಅಧಿಕ ಭಾರತೀಯರನ್ನು ಹೊತ್ತ ಹಡಗು ಶುಕ್ರವಾರ ಕೊಚ್ಚಿಗೆ ತೆರಳಲಿದೆ ಮಾಲ್ಡೀವ್ಸ್ನಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ಭಾರತೀಯರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ, ಭಾರತೀಯ ಮೂಲದವರು ಇಲ್ಲಿ ಸ್ಥಳೀಯರೇ ಆಗಿದ್ದಾರೆ. ಈ ದ್ವೀಪರಾಷ್ಟ್ರ ಪ್ರಮುಖವಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ.
ಪ್ರಸ್ತುತ ಮಾಲ್ಡೀವ್ಸ್ನಲ್ಲೂ ಕರೊನಾ ಸೋಂಕು ವ್ಯಾಪಿಸುತ್ತಿದೆ. 615 ಜನರು ಸೋಂಕಿಗೆ ಒಳಗಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇವರನ್ನು ಕರೆತರಲು ಜಲಾಶ್ವ ಹಾಗೂ ಮಘರ್ ಹಡಗುಗಳನ್ನು ಕಳುಹಿಸಲಾಗಿದೆ. ಸಮುದ್ರ ಸೇತು ಕಾರ್ಯಾಚರಣೆಯ ಮೊದಲ ಹಂತದಲ್ಲಿ ಮಾಲ್ಡೀವ್ಸ್ನಿಂದ ಭಾರತೀಯರನ್ನು ಕರೆತರಲಾಗುತ್ತಿದೆ.
ಸದ್ಯಕ್ಕೆ ಇಲ್ಲಿ ಲಾಕ್ಡೌನ್ ಇದೆ. ಇದರಿಂದಾಗಿ ಉದ್ಯೋಗ ಕಳೆದುಕೊಂಡವರನ್ನು ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ಗುರುತಿಸಿ ತಾಯ್ನಾಡಿಗೆ ಕಳುಹಿಸಲಾಗುತ್ತಿದೆ. ಉಳಿದಂತೆ ಇತರರಿಗೆ ಇಲ್ಲಿ ಯಾವುದೇ ತೊಂದರೆ ಎದುರಾಗಿಲ್ಲ. ಕೆಲಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಲೆಯಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಕನ್ನಡಿಗ ಸೇಸುರಾಜ್ ಮೈಕಲ್ ತಿಳಿಸಿದ್ದಾರೆ.
ಜನರನ್ನು ಕರೆತರಲೆಂದೇ ಹಡಗಿನಲ್ಲಿರುವ ಅನುಪಯುಕ್ತ ಅಳವಡಿಕೆಗಳನ್ನು ತೆರವುಗೊಳಿಸಿ ಸಜ್ಜುಗೊಳಿಸಲಾಗಿದೆ. ಇದಲ್ಲದೇ, ಕೊಲ್ಲಿರಾಷ್ಟ್ರಗಳಿಂದ ಭಾರತೀಯರನ್ನು ಕರೆತರಲು 14 ಹಡಗುಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.