

ಇದೇ ಏ.22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ದಾಳಿ ನಡೆಸಿದ ಕೂಡಲೇ ಬುಧವಾರ ಬೆಳಿಗ್ಗೆ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆ ತೀವ್ರ ಫಿರಂಗಿ ದಾಳಿ ನಡೆಸಿದ್ದು, ಕನಿಷ್ಠ 11 ನಾಗರಿಕರು ಮೃತಪಟ್ಟಿದ್ದು, 43 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜಮ್ಮು-ಕಾಶ್ಮೀರದ ಬಾಲಕೋಟ್, ಮೆಂಧರ್, ಮಂಕೋಟ್, ಸಾಗ್ರಾ, ಕೃಷ್ಣ ಘಾಟಿ, ಗುಲ್ಪುರ್, ಕೆರ್ನಿ ಮತ್ತು ಪೂಂಚ್ ಜಿಲ್ಲಾ ಕೇಂದ್ರಗಳಿಂದ ಶೆಲ್ ದಾಳಿ ವರದಿಯಾಗಿದ್ದು, ಇದರ ಪರಿಣಾಮವಾಗಿ ಡಜನ್ಗಟ್ಟಲೆ ಮನೆಗಳಿಗೆ ಹಾನಿಯಾಗಿದೆ.
ಪೂಂಚ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಾವುನೋವುಗಳನ್ನು ದೃಢಪಡಿಸಿದ್ದಾರೆ. ''ಪಾಕಿಸ್ತಾನದ ವಿವೇಚನಾರಹಿತ ಶೆಲ್ ದಾಳಿಯು ಗಡಿ ನಿವಾಸಿಗಳಲ್ಲಿ ಭಯಭೀತತೆಯನ್ನು ಉಂಟುಮಾಡಿದೆ. ಅವರು ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆಯಬೇಕಾಯಿತು ಅಥವಾ ತಮ್ಮ ಹಳ್ಳಿಗಳ ಒಳಗೆ ಅಥವಾ ಹೊರಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)