ಮಹಾರಾಷ್ಟ್ರ ತೊರೆಯುವ ಕ್ವಾಂಟಮ್ ಟೆಕ್​ ಕಂಪನಿಗಳಿಗೆ ಮುಕ್ತ ಸ್ವಾಗತ: ಡಿ.ಕೆ. ಶಿವಕುಮಾರ್​

DK Shivakumar
Published on

ಬೆಂಗಳೂರು: “ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಲಸೆ ಬರುವ ಐಟಿ ಕಂಪನಿಗಳಿಗೆ ಸ್ವಾಗತ. ಈ ಕಂಪನಿಗಳಿಗೆ ನಾವು ತಂತ್ರಜ್ಞಾನ, ವಿದ್ಯುತ್ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲು ತಯಾರಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದ ಮಾನ್ಯತಾ ಟೆಕ್ ಪಾರ್ಕಿನಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ನಡೆದ ಕ್ವಾಂಟಮ್ ಶೃಂಗಸಭೆಯ ಬಳಿಕ ಮಾತನಾಡಿದ ಡಿಸಿಎಂ,“ನಾಲ್ಕು ದಿನಗಳ ಹಿಂದೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅವರು ಪುಣೆಯಿಂದ ಬೆಂಗಳೂರಿಗೆ ಐಟಿ ಕಂಪನಿಗಳು ಹೋಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುವೆ. ನಾವು ದೇಶದ ಇತರೆ ರಾಜ್ಯಗಳ ಜೊತೆ ಸ್ಪರ್ಧಿಸುತ್ತಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆ” ಎಂದರು.

“ಮಹಾರಾಷ್ಟ್ರವೂ ಸಹ ಐಟಿ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ರಾಜ್ಯ. ಅಲ್ಲಿನ ಐಟಿ ಹಬ್ ಪುಣೆಯ ಹಿಂಜವಾಡಿಯು ಅತ್ಯಂತ ಪ್ರಮುಖ ಐಟಿ ಪ್ರದೇಶ. ಆದರೆ, ನಮ್ಮ ರಾಜ್ಯಕ್ಕೆ ಬರುವ ಕಂಪನಿಗಳನ್ನು ನಾವು ಮುಕ್ತವಾಗಿ ಸ್ವಾಗತಿಸಿ, ಬೆಂಬಲಿಸುತ್ತೇವೆ” ಎಂದು ಹೇಳಿದರು.

ಬಿಜೆಪಿ ಮತಗಳ್ಳತನ ಜನರ ಗಮನಕ್ಕೆ ತರಬೇಕು

ಮತಗಳ್ಳತನದ ವಿರುದ್ದ ಪ್ರತಿಭಟನೆ ನಗರದ ಒಳಗೆ ಹಮ್ಮಿಕೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ನಮ್ಮ ರಾಜಕೀಯ ನಿಲುವಿನ ಬಗ್ಗೆ ಬೇರೆಯವರಿಗೆ ಏಕೆ ಇರುಸು ಮುರುಸಾಗುತ್ತಿದೆ. ನಾವು ಏಕೆ ಬೇರೆಯವರಿಗೆ ಇದರ ಬಗ್ಗೆ ಉತ್ತರಿಸಬೇಕು. ನಾವು ಕರ್ನಾಟಕದ ಜನರಿಗೆ ಉತ್ತರದಾಯಿಗಳು. ಬಿಜೆಪಿಯವರು ವಿಧಾನಸಭಾ ಚುನಾವಣೆ ವೇಳೆ ಚಿಲುಮೆ ಸಂಸ್ಥೆ ಬಳಸಿಕೊಂಡು ಅಕ್ರಮ ಎಸಗಿದರು" ಎಂದರು.

"ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಈ ವಿಚಾರದಲ್ಲಿ ತನಿಖೆ ನಡೆಸಿಯೇ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ರಾಜಕೀಯ ಉದ್ದೇಶಕ್ಕೆ ರಾಜ್ಯಕ್ಕೆ ಬರುತ್ತಿಲ್ಲ. ಬದಲಿಗೆ ಜನರನ್ನು ಎಚ್ಚರಗೊಳಿಸಲು ಆಗಮಿಸುತ್ತಿದ್ದಾರೆ. ನಮಗೆ ಪ್ರಜಾಪ್ರಭುತ್ವ ಉಳಿಯಬೇಕು. ಚುನಾವಣಾ ಆಯೋಗ ರಾಜಕೀಯ ಪಕ್ಷದ ಭಾಗವಾಗುವುದನ್ನು ತಪ್ಪಿಸಬೇಕು” ಎಂದು ನುಡಿದರು.

ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಬಿಜೆಪಿ ಮತಗಳ್ಳತನ ನಡೆಸಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕು ಎಂಬುದು ನಮ್ಮ ಉದ್ದೇಶ. ಬಿಜೆಪಿ ಮತಗಳ್ಳತನದ ಬಗ್ಗೆ ಪ್ರತಿಭಟನಾ ಸಭೆ ಅಥವಾ ರ್ಯಾಲಿ ಮಾಡಬೇಕೆ ಎನ್ನುವುದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ತೀರ್ಮಾನಿಸಲಾಗುವುದು” ಎಂದು ಹೇಳಿದರು.

“ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯವರು ಚುನಾವಣಾ ಅಕ್ರಮ ಎಗಸಿರುವುದನ್ನು ಬೆಳಕಿಗೆ ತರಬೇಕು. ಈ ಬಗ್ಗೆ ಪಕ್ಷದಿಂದಲೂ ಸಂಶೋಧನೆ ನಡೆದಿದೆ. ಆದರೆ ಜನ ಸೇರುವುದರ ಕುರಿತು ನ್ಯಾಯಲಯದ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಗಳು ಇರುವ ಕಾರಣಕ್ಕೆ ಪ್ರತಿಭಟನೆಯ ಸ್ವರೂಪವನ್ನು ಚರ್ಚೆ ಮಾಡಲಾಗುವುದು” ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net