ಅವರಿಬ್ಬರಿಗೆ ಕಣ್ಣೀರು ಬರಲ್ಲ, ಯಡಿಯೂರಪ್ಪ ಅವರಿಗೆ ಕಣ್ಣೀರು ಬಂದಿದ್ದರಲ್ಲಿ ತಪ್ಪಿಲ್ಲ: ಶಾಸಕ ರಘುಪತಿ ಭಟ್​

Tears
Published on

ಉಡುಪಿ: ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅಪಾರ ಶ್ರಮವಹಿಸಿ, ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿಯನ್ನೂ ಹಿಡಿದು, ಪ್ರವಾಹ-ಕರೊನಾ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಮಾತನಾಡಿದ ಬಿ.ಎಸ್​. ಯಡಿಯೂರಪ್ಪ ಅವರು, ಗದ್ಗದಿತರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ. ಆದರೆ ಅವರ ಕಣ್ಣೀರಿನ ಕುರಿತು ಉಡುಪಿ ಶಾಸಕ ರಘುಪತಿ ಭಟ್​ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ನೀಡಿರುವ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಯಡಿಯೂರಪ್ಪ ಅವರು ಯಾವುದೇ ಒತ್ತಡದಿಂದ ರಾಜೀನಾಮೆ ಕೊಟ್ಟಿಲ್ಲ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಸಂತೋಷದಿಂದಲೇ ರಾಜೀನಾಮೆ ನೀಡಿದ್ದಾರೆ ಎಂದಿದ್ದು, ಮಾತ್ರವಲ್ಲದೆ ಅವರು ಕಣ್ಣೀರು ಹಾಕಿದ್ದರ ಕುರಿತು ಸಮರ್ಥನೆಯನ್ನೂ ನೀಡಿದ್ದಾರೆ.

ಯಡಿಯೂರಪ್ಪ ಅವರಿಗೆ ಕಣ್ಣೀರು ಬಂದಿರುವುದು ಸ್ವಾಭಾವಿಕ. ಭಾವನಾತ್ಮಕ ಜೀವಿಗಳಿಗೆ ಕಣ್ಣೀರು ಬರುತ್ತದೆ. ಭಾವನೆ ಇಲ್ಲದ ಕಠೋರ ಮನಸ್ಸಿನವರಿಗೆ, ಕೇವಲ ವ್ಯವಹಾರ ನಡೆಸುವವರಿಗೆ ಕಣ್ಣೀರು ಬರುವುದಿಲ್ಲ ಎಂದಿರುವ ರಘುಪತಿ ಭಟ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಬ್ಬರೂ ಕಠೋರ ಮನಸ್ಸಿನವರು, ಆ ಇಬ್ಬರಿಗೆ ಕಣ್ಣೀರು ಬರುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net