ಮಾರಿಗೆ ದಾರಿ ಬಿಡಿ; 'ಟೋಬಿ' ಬಿಡುಗಡೆಗೆ ಕೇವಲ 5 ದಿನಗಳು ಬಾಕಿ!

Untitled design (16)
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ, ನಿರ್ದೇಶಕ, ಬರಹಗಾರ ರಾಜ್​ ಬಿ.ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ಟೋಬಿ' ಚಿತ್ರದ ಬಿಡುಗಡೆಗೆ ಇದೀಗ ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಬಗ್ಗೆ ಸ್ವತಃ ರಾಜ್​, ತಮ್ಮ ಟ್ವಿಟರ್​ ಖಾತೆಯಲ್ಲಿ ಕಿರು ವಿಡಿಯೋ ಹಂಚಿಕೊಳ್ಳುವ ಮುಖೇನ ಮಾಹಿತಿ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಳೆದ ತಿಂಗಳಲ್ಲಿ ಬಿಡುಗಡೆಗೊಂಡ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ', 'ಆಚಾರ್​ & ಕೋ' ಮತ್ತು 'ಕೌಸಲ್ಯಾ ಸುಪ್ರಜ ರಾಮ' ಸೇರಿದಂತೆ ಇತ್ತೀಚಿಗೆ ರಿಲೀಸ್ ಆದ 'ಕ್ಷೇತ್ರಪತಿ' ಚಿತ್ರಗಳು ಚಿತ್ರಮಂದಿರದಲ್ಲಿ ಹೆಚ್ಚಿನ ಪ್ರದರ್ಶನದ ಜತೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಕೂಡ ಮಾಡುತ್ತಿದೆ. ಈ ಸಿನಿಮಾಗಳು ಕನ್ನಡ ಸಿನಿಪ್ರೇಕ್ಷಕರನ್ನು ಥಿಯೇಟರ್​ಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದ್ದು, ಈ ಸಾಲಿಗೆ ಇದೀಗ ರಾಜ್​ ಬಿ.ಶೆಟ್ಟಿ ನಟನೆಯ 'ಟೋಬಿ' ಕೂಡ ಸೇರ್ಪಡೆಯಾಗಲು ಸಜ್ಜಾಗಿದೆ.

ಈ ಹಿಂದೆಯೇ ಚಿತ್ರತಂಡ ತಿಳಿಸಿದಂತೆ ಟೋಬಿ ಇದೇ ಆಗಸ್ಟ್​ 25 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ನಟ ರಾಜ್​ ಬಿ.ಶೆಟ್ಟಿ, ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಆದ ಮೊದಲ ದಿನದಿಂದಲೂ ತಮ್ಮ ಅಭಿಮಾನಿಗಳಿಗೆ ಸಿನಿಮಾ ಕುರಿತು ನಿರಂತರವಾಗಿ ಮಾಹಿತಿ ನೀಡುತ್ತ ಬಂದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಟ್ರೇಲರ್ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ, ಭರವಸೆಯನ್ನು ಮೂಡಿಸಿದ್ದು, ಚಿತ್ರದ ರಿಲೀಸ್​ಗೆ ಕಾತರದಿಂದ ಕಾಯುತ್ತಿದ್ದಾರೆ.

ಟ್ರೇಲರ್​​ ಮೂಲಕ ಭಾರೀ ಸದ್ದು ಮಾಡುತ್ತಿರುವ ರಾಜ್​ ಬಿ.ಶೆಟ್ಟಿ ಅವರ ಟೋಬಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯ ನಂತರ ಯಾವ ರೀತಿ ಕಮಾಲ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net