ಜಮಾಲಿಗುಡ್ಡದಲ್ಲಿ ಅದಿತಿ ಕಣ್ಣೀರು; ಕಾಲ್ಪನಿಕ ಪ್ರಪಂಚದಲ್ಲಿ ಭಾವನಾತ್ಮಕ ಪಯಣ

Aditi
Published on

ಬೆಂಗಳೂರು: ಡಾಲಿ ಧನಂಜಯ ಈ ವರ್ಷ ಸಿಕ್ಸರ್ ಬಾರಿಸಿದ ಸಂಭ್ರಮದಲ್ಲಿದ್ದಾರೆ. ಅವರು ಈ ವರ್ಷ ನಟಿಸಿರುವ ಆರನೇ ಚಿತ್ರ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಇದೇ ಡಿ. 30ರಂದು ಬಿಡುಗಡೆಯಾಗುತ್ತಿರುವುದೇ ಅದಕ್ಕೆ ಕಾರಣ. ಇತ್ತೀಚೆಗಷ್ಟೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ಶುಭಹಾರೈಸಿದರು. ಚಿತ್ರಕ್ಕೆ ಕುಶಾಲ್ ಗೌಡ ನಿರ್ದೇಶನವಿದೆ.

‘ಈ ಚಿತ್ರವೊಂದು ಕಾಲ್ಪನಿಕ ಪ್ರಪಂಚ. ಜತೆಗೆ ಭಾವನಾತ್ಮಕ ಪಯಣ ಕೂಡ. ಧನಂಜಯ ಮತ್ತು ಬೇಬಿ ಪ್ರಾಣ್ಯಾ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿಬಂದಿವೆ. 1995, 96ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಚಿಕ್ಕಮಗಳೂರಿನ ಬಾಬಾ ಬುಡನ್​ಗಿರಿಯ ಸೊಬಗು ಚಿತ್ರದ ಮತ್ತೊಂದು ಹೈಲೈಟ್’ ಎಂದು ಕುಶಾಲ್ ಮಾಹಿತಿ ಹಂಚಿಕೊಂಡರು. ನಾಯಕ ಧನಂಜಯ, ‘ಈ ವರ್ಷ ಬಿಡುಗಡೆಯಾಗುತ್ತಿರುವ ನನ್ನ ಆರನೇ ಚಿತ್ರವಿದು. ಒಂದು ಫೀಲ್ ಗುಡ್ ಸಿನಿಮಾ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಚಿತ್ರ’ ಎಂದರು.

ಬಳಿಕ ನಾಯಕಿ ಅದಿತಿ ಪ್ರಭುದೇವ, ‘ನನ್ನ ಕರಿಯರ್​ನಲ್ಲೇ ಸದಾ ನೆನಪಿನಲ್ಲುಳಿಯುವ ಚಿತ್ರವಿದು. ಭಾವನಾತ್ಮಕ ಸನ್ನಿವೇಶಗಳ ಚಿತ್ರೀಕರಣದ ವೇಳೆ ಎಷ್ಟೋ ಕಡೆ ನಾನು ನಿಜವಾಗಿ ಅತ್ತಿದ್ದೂ ಇದೆ’ ಎಂದು ಅನುಭವಗಳನ್ನು ಹಂಚಿಕೊಂಡರು. ಧನಂಜಯ, ಅದಿತಿ ಜತೆ ಯಶ್ ಶೆಟ್ಟಿ, ರುಶಿಕಾ, ದಿವ್ಯಾ, ಪ್ರಾಣ್ಯಾ, ಸಂತು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಹಾಗೂ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net