

ಬೆಂಗಳೂರು: ರೈಲು-ವಿಮಾನಗಳಲ್ಲಿ ನೀಡುವ, ಬಸ್ ನಿಲ್ದಾಣಗಳಲ್ಲಿ ಸಿಗುವ ಆಹಾರದ ಬಗ್ಗೆ ಆಗಾಗ ದೂರುಗಳು ಕೇಳಿ ಬರುವುದು ಹೊಸದೇನಲ್ಲ. ಅಂಥದ್ದೇ ಒಂದು ದೂರು ರೈಲ್ವೆ ಇಲಾಖೆ ವಿರುದ್ಧ ಕೇಳಿಬಂದಿದೆ. ಅದಕ್ಕೆ ಕಾರಣ ಆಮ್ಲೆಟ್ನಲ್ಲಿ ಕಾಣಿಸಿದ್ದ ಜಿರಳೆ.
ಹೌದು.. ರೈಲ್ವೆ ಪ್ರಯಾಣದ ವೇಳೆ ರೈಲ್ವೆಯವರೇ ನೀಡಿದ್ದ ಆಮ್ಲೆಟ್ನಲ್ಲಿ ಜಿರಳೆ ಇದ್ದಿದ್ದ ಬಗ್ಗೆ ದೂರಿರುವ ಪ್ರಯಾಣಿಕರೊಬ್ಬರು ಅದರ ಫೋಟೋ ಕೂಡ ಹಂಚಿಕೊಂಡು ಪ್ರಶ್ನಿಸಿದ್ದಾರೆ. ಯೋಗೇಶ್ ಮೋರೆ ಎಂಬ ಪ್ರಯಾಣಿಕರೊಬ್ಬರು ನಿನ್ನೆ ರೈಲಿನಲ್ಲಿ ಪ್ರಯಾಣಿಸಿದ್ದಾಗ ಆದ ಈ ಘಟನೆಯನ್ನು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ನಿನ್ನೆ ನಾವು ದೆಹಲಿಯಿಂದ 22222 ನಂಬರ್ ರೈಲಿನಲ್ಲಿ ಪ್ರಯಾಣಿಸಿದ್ದೆವು. ಬೆಳಗ್ಗೆ ಮಗುವಿಗೆಂದು ಒಂದು ಎಕ್ಸ್ಟ್ರಾ ಆಮ್ಲೆಟ್ ಆರ್ಡರ್ ಮಾಡಿದ್ದಾಗ ಏನು ಕಾಣಿಸಿತ್ತು ಎಂಬುದರ ಫೋಟೋ ಇಲ್ಲಿ ಹಾಕಿದ್ದೇನೆ. ನನ್ನ ಮಗಳಿಗೆ 2.5 ವರ್ಷ, ಆಕೆಗೆ ಏನಾದರೂ ಆಗಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಅವರು, ಆಮ್ಲೆಟ್ನಲ್ಲಿ ಜಿರಳೆ ಇರುವ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ರೈಲ್ವೆಯವರು ಪಿಎನ್ಆರ್ ನಂಬರ್ ಕೊಡಿ ಎಂದು ಕೇಳಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬರೀ ನಂಬರ್ ಕೇಳ್ತೀರಿ, ಏನೂ ಪ್ರಯೋಜನ ಎಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಯೋಗೇಶ್ ಟ್ವೀಟ್ ಗಮನಿಸಿರುವ ಇನ್ನೊಬ್ಬ ಪ್ರಯಾಣಿಕ ಆ ಟ್ವೀಟ್ ಕೋಟ್ ಮಾಡಿ ಹಂಚಿಕೊಂಡಿದ್ದು, ತಾನೂ ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡಿದ್ದಾರೆ. ನಾನೂ ಬೆಳಗ್ಗೆ ಅದೇ ರೈಲಲ್ಲಿದ್ದೆ, ತಿಂಡಿಗೆ ಆಮ್ಲೆಟ್ ತಿಂದ ಬಗ್ಗೆ ನನಗೆ ಈಗ ಪಶ್ಚಾತ್ತಾಪ ಆಗುತ್ತಿದೆ. ಇನ್ನು ಮುಂದೆ ರೈಲ್ವೆಯವರಿಂದ ಆಹಾರ ತೆಗೆದುಕೊಳ್ಳುವುದಿಲ್ಲ ಎಂದಿರುವ ಆತ, ಅನನುಕೂಲತೆಗೆ ಪಶ್ಚಾತ್ತಾಪ ಎಂದಷ್ಟೇ ಹೇಳುತ್ತೀರಿ ವಿನಃ ಜರುಗಿಸಿದ ಕ್ರಮ ಏನು? ದಯವಿಟ್ಟು ತಿಳಿಸಿ ಎಂದು ಆತ ರೈಲ್ವೆಯವರನ್ನು ಪ್ರಶ್ನಿಸಿದ್ದಾರೆ.