

ನೆಲ್ಯಾಡಿ: ನೆಲ್ಯಾಡಿಯ ಶ್ರೀರಾಮ ವಿದ್ಯಾಲಯದಲ್ಲಿ ಬುಧವಾರ ಓಣಂ ಹಬ್ಬ ಆಚರಿಸಲಾಯಿತು. ಅತಿಥಿಗಳಾಗಿ ಪ್ರಗತಿಪರ ಕೃಷಿಕ ಪ್ರಸನ್ನ ಹೊಸವಕ್ಲು ಹಾಗೂ ಅವರ ಪತ್ನಿ ನಿವೇದಿತ ಆಗಮಿಸಿ, ಓಣಂ ಹಬ್ಬದ ಆಚರಣೆಯ ಮಹತ್ವ ಹಾಗೂ ಹಿನ್ನೆಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶುಭಹಾರೈಸಿದರು. ಶಿಶು ಮಂದಿರದ ಪೋಷಕಿ ಪ್ರಿಯಾಂಕ ಹಾಗೂ ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಪೂಕಳವನ್ನು ಹಾಕಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಔತಣ ಏರ್ಪಡಿಸಲಾಯಿತು. ಶಾಲಾ ಶಿಕ್ಷಕರು, ಶಿಕ್ಷಕೇತರ ಬಂಧುಗಳು, ಪಾಲಕರು ಹಾಗೂ ಊರವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ಅದೇ ರೀತಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಹಾಗೂ ಸಾಮೂಹಿಕ ಹುಟ್ಟುಹಬ್ಬ ಆಚರಿಸಲಾಯಿತು. ಶಿಕ್ಷಕಿ ಭಾಗೀರಥಿ ಸ್ವಾಗತಿಸಿ, ಶುಭರಾಣಿ ವಂದಿಸಿದರು. ಮಮತಾ ನಿರೂಪಿಸಿದರು.