

ಪುತ್ತೂರು ಗ್ರಾಮಾಂತರ: ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿನ ರಸ್ತೆ ತಿರುವು ಭಾಗದಲ್ಲಿ ಗುರುವಾರ ನಡೆದಿದೆ.
ಎಣ್ಮೂರಿನ ನವಾಝ್ ಗಾಯಗೊಂಡ ಸವಾರ. ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕಾಣಿಯೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ನವಾಝ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಕಾಲಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ಸರ್ವೆಯ ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎಂ.ಹನೀಫ್ ರೆಂಜಲಾಡಿ ಗಾಯಾಳುವನ್ನು ಆಟೋರಿಕ್ಷಾದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.