

ಮಂಗಳೂರು : ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದ ಸ್ಥಾನಕ್ಕೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ. ಅ.21ರಂದು ಉಪ ಚುನಾವಣೆ ನಡೆಯಲಿದ್ದು, ಗುರುವಾರ (ಸೆ.19)ದಿಂದಲೇ ನೀತಿ ಸಂಹಿತೆ ಜಾರಿಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.3 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 7ರಂದು ನಾಮಪತ್ರ ಹಿಂಪಡೆಯಲು ಕೊನೆದಿನ. ಅ.21ರಂದು ಬೆಳಗ್ಗೆ 8ರಿಂದ ಸಾಯಂಕಾಲ 4 ಗಂಟೆ ವರೆಗೆ ಚುನಾವಣೆ ನಡೆಯಲಿದೆ. 24ರಂದು ಮತ ಎಣಿಕೆ ನಡೆಯಲಿದೆ. 28ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತಗಳ ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 392 ಮತಗಟ್ಟೆಗಳಿದ್ದು, 6,037 ಮಂದಿ ಮತದಾರರಿದ್ದಾರೆ. ದ.ಕ.ದಲ್ಲಿ 234 ಮತಗಟ್ಟೆ, 3,551 ಮತದಾರರು, ಉಡುಪಿಯಲ್ಲಿ 158 ಮತಗಟ್ಟೆ, 2,486
ಮತದಾರರು ಇದ್ದಾರೆ. ದ.ಕ.ಜಿಲ್ಲೆಯಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸಹಿತ 234 ಸ್ಥಳೀಯ ಸಂಸ್ಥೆಗಳಲ್ಲಿ 3,580 ಮಂದಿ ಇದ್ದಾರೆ. ಈ ಪೈಕಿ 3,551 ಮಂದಿ ಪ್ರಸ್ತುತ ಸದಸ್ಯರಿದ್ದಾರೆ. 29 ಸ್ಥಾನಗಳು ಖಾಲಿ ಇವೆ. ಉಡುಪಿ ಜಿಲ್ಲೆಯಲ್ಲಿ 4 ಸ್ಥಾನಗಳು ಖಾಲಿ ಇವೆ ಎಂದು ಅವರು ತಿಳಿಸಿದರು.
ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಅಭಿವೃದ್ಧಿ ಪರ ಘೋಷಣೆ ಮಾಡುವಂತಿಲ್ಲ. ರಾಜ್ಯ ಮತ್ತು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ(ಎಂಸಿಎಂಸಿ) ಸಮಿತಿ ಕಾರ್ಯನಿರ್ವಹಿಸಲಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ
ಮಾದರಿಯಲ್ಲೇ ನಿಯಮಾವಳಿ ಈ ಉಪ ಚುನಾವಣೆಗೂ ಅನ್ವಯಿಸಲಿದೆ. ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೆಲೆನ್ಸ್ ತಂಡಗಳು ಕಾರ್ಯನಿರ್ವಹಿಸಲಿವೆ. ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್ ಹೋರ್ಡಿಂಗ್‌ಗಳನ್ನು ತಕ್ಷಣ ತೆರವುಗೊಳಿಸಲಾಗುವುದು. ಸಹಾಯಕ ಚುನಾವಣಾಧಿಕಾರಿಗಳಾಗಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್.ಕೆ., ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್, ಮನಪಾ ಆಯುಕ್ತ ಆನಂದ್‌ಸಿ.ಎಲ್., ಸಹಾಯಕ ಆಯುಕ್ತ ಗಿರೀಶ್ ನಂದನ್ ಉಪಸ್ಥಿತರಿದ್ದರು.