ಸಾಕು ಬಿಡ್ರಿ ಮುಖ್ಯಮಂತ್ರಿಗಂತೂ ಇಷ್ಟೊಂದು ಪ್ರಚಾರ ಮಾಡೋದೆ ಇಲ್ಲ: ಟಿಎಂಸಿ ಸಂಸದೆ ನುಸ್ರತ್ ವಿಡಿಯೋ ವೈರಲ್!​

Nusrath
Published on

ಕೋಲ್ಕತ: ಸುಮಾರು ಒಂದು ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸಿ ತಾಳ್ಮೆ ಕಳೆದುಕೊಂಡು ಕೋಪ ಮಾಡಿಕೊಂಡ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದೆ ನುಸ್ರತ್​ ಜಹಾನ್​ರನ್ನು ಬಿಜೆಪಿ ವ್ಯಂಗ್ಯವಾಡಿದೆ.

"ನಾನು ಒಂದು ಗಂಟೆಗೂ ಹೆಚ್ಚು ಸಮಯ ಪ್ರಚಾರ ಮಾಡುತ್ತಿದ್ದೇನೆ. ಹೇಳಬೇಕೆಂದರೆ ಮುಖ್ಯಮಂತ್ರಿಯವರಿಗೂ ಇಷ್ಟು ಸಮಯ ಪ್ರಚಾರ ಮಾಡುವುದಿಲ್ಲ," ಎಂದು ಬೇಸರದಿಂದ ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು.

ದಿನಾಂಕವೇ ಇಲ್ಲದ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ತೆರೆದ ವಾಹನ ಒಂದರಲ್ಲಿ ನಿಂತಿರುವ ನುಸ್ರತ್​ರನ್ನು ವ್ಯಕ್ತಿಯೊಬ್ಬ ಮನವಿ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಇದೆ. ಮುಖ್ಯ ರಸ್ತೆಯವರೆಗೂ ಪ್ರಚಾರ ಮಾಡೋಣ, ಇಲ್ಲೇ ಹತ್ತಿರದಲ್ಲಿದೆ. ಇನ್ನು ಅರ್ಧ ಕಿ.ಮೀ ಗೆ ಮುಖ್ಯರಸ್ತೆ ಸಿಗುತ್ತದೆ ಎಂದು ಹೇಳಿದರೂ ಕೇಳದ ನುಸ್ರತ್​, ವಾಹನದಿಂದ ಕೆಳಗಿಳಿದು ಪ್ರಚಾರಕ್ಕೆ ಗುಡ್​ಬೈ ಹೇಳುತ್ತಾರೆ.

25 ಸೆಕೆಂಡಿನ ವಿಡಿಯೋವನ್ನು ಪಶ್ಚಿಮ ಬಂಗಾಳ ಬಿಜೆಪಿ, ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, #MamataLosingNandigram ಎಂಬ ಅಡಿಬರಹ ನೀಡಿದ್ದಾರೆ.

ಪ್ರತಿಷ್ಠೆಯ ಕಣವಾಗಿರುವ ನಂದಿಗ್ರಾಮದಲ್ಲಿ ಎರಡು ಪಕ್ಷಗಳಿಂದ ಸ್ಟಾರ್​ ಪ್ರಚಾರಕರನ್ನು ನೇಮಿಸಿವೆ. ಹೈವೋಲ್ಟೇಜ್​ ಕ್ಷೇತ್ರವಾಗಿರುವ ನಂದಿಗ್ರಾಮದಲ್ಲಿ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೆಂದು ಅಧಿಕಾರಿಯ ನಡುವೆ ತೀವ್ರ ಪೈಪೋಟಿ ಇದೆ.

ಅಂದಹಾಗೆ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮನತದಾನ ನಡೆಯಲಿದೆ. ಏಪ್ರಿಲ್​ 29ಕ್ಕೆ ಮತದಾನ ಮುಗಿಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net