More

    ಭಾರತಕ್ಕೆ ಆಂಗ್ಲರ ಎದುರು ಹ್ಯಾಟ್ರಿಕ್ ಸರಣಿ ಗೆಲುವು, ಅಂತಿಮ ಏಕದಿನದಲ್ಲಿ ಕೊಹ್ಲಿ ಪಡೆ ವಿಕ್ರಮ

    ಪುಣೆ: ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಸರಣಿ ಗೆಲುವಿನ ಸಂಭ್ರಮದೊಂದಿಗೆ ಬೀಗಿದೆ. ಸಂಘಟಿತ ನಿರ್ವಹಣೆ ತೋರಿದ ಭಾರತ ತಂಡ ಎಂಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸ್ಯಾಮ್ ಕರ‌್ರನ್ (95*ರನ್, 83 ಎಸೆತ, 9 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ 7 ರನ್‌ಗಳಿಂದ ರೋಚಕವಾಗಿ ಗೆದ್ದು, 2-1ರಿಂದ ಸರಣಿ ವಶಪಡಿಸಿಕೊಂಡಿತು. ಪ್ರವಾಸದಲ್ಲಿ ಒಂದಾದರೂ ಸರಣಿ ಗೆಲುವು ಕಾಣುವ ಆಂಗ್ಲರ ಆಸೆಗೆ ತಣ್ಣೀರು ಎರಚಿದ ಭಾರತ ತಂಡ, ಹೋಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನತೆಗೆ ಗೆಲುವಿನ ಉಡುಗೊರೆ ಅರ್ಪಿಸಿತು. ಐಪಿಎಲ್ 14ನೇ ಆವೃತ್ತಿಗೆ ಮುನ್ನ ಟೀಮ್ ಇಂಡಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗೆಲುವಿನ ವಿರಾಮವನ್ನೂ ನೀಡಿತು.

    ಸತತ 3ನೇ ಏಕದಿನ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಎಡಗೈ ಆರಂಭಿಕ ಶಿಖರ್ ಧವನ್ (67 ರನ್, 56 ಎಸೆತ, 10 ಬೌಂಡರಿ), ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (78 ರನ್, 62 ಎಸೆತ, 5 ಬೌಂಡರಿ, 4 ಸಿಕ್ಸರ್) ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (64 ರನ್, 44 ಎಸೆತ, 5 ಬೌಂಡರಿ, 4 ಸಿಕ್ಸರ್) ಬಿರುಸಿನ ಅರ್ಧಶತಕದ ನಡುವೆ ಸ್ಲಾಗ್ ಓವರ್‌ಗಳಲ್ಲಿ ಕುಸಿದು 48.2 ಓವರ್‌ಗಳಲ್ಲಿ 329 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ವೇಗಿಗಳಾದ ಭುವನೇಶ್ವರ್ ಕುಮಾರ್ (42ಕ್ಕೆ 3) ಮತ್ತು ಶಾರ್ದೂಲ್ ಠಾಕೂರ್ (67ಕ್ಕೆ 4) ದಾಳಿಗೆ ಕುಸಿದ ಇಂಗ್ಲೆಂಡ್ ತಂಡ 9 ವಿಕೆಟ್‌ಗೆ 322 ರನ್ ಗಳಿಸಿ ವೀರೋಚಿತ ಸೋಲು ಕಂಡಿತು. ಕಳಪೆ ನಿರ್ವಹಣೆ ತೋರಿದ ಫೀಲ್ಡರ್‌ಗಳು 4ಕ್ಕೂ ಅಧಿಕ ಕ್ಯಾಚ್ ಕೈಚೆಲ್ಲಿದ್ದು ಭಾರತ ಗೆಲುವಿಗೆ ಕೊನೇ ಎಸೆತದವರೆಗೂ ಕಾಯುವಂತೆ ಮಾಡಿತು.

    ಕೊನೇವರೆಗೆ ಕಾಡಿದ ಸ್ಯಾಮ್ ಕರ‌್ರನ್
    ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳ ನಿರ್ಗಮನದ ಬಳಿಕವೂ ಆಲ್ರೌಂಡರ್ ಸ್ಯಾಮ್ ಕರ‌್ರನ್ ಕೊನೆಯವರೆಗೂ ಆಂಗ್ಲರ ಗೆಲುವಿನ ಆಸೆ ಜೀವಂತವಿಟ್ಟರು. ಮೊಯಿನ್ ಅಲಿ (29) ಜತೆ 8ನೇ ವಿಕೆಟ್‌ಗೆ 57 ರನ್ ಪೇರಿಸಿದ ಕರ‌್ರನ್, 9ನೇ ವಿಕೆಟ್‌ಗೆ ಮಾರ್ಕ್ ವುಡ್ (14) ಜತೆ 60 ರನ್ ಸೇರಿಸಿದರು. ನಟರಾಜನ್ ಎಸೆದ ಪಂದ್ಯದ ಕೊನೇ ಓವರ್‌ನಲ್ಲಿ 14 ರನ್ ಬೇಕಾಗಿದ್ದಾಗ ಮೊದಲ ಎಸೆತದಲ್ಲೇ ಮಾರ್ಕ್ ವುಡ್ ರನೌಟಾದರು. ನಂತರ ರೀಸ್ ಟಾಪ್ಲೆ 2ನೇ ಎಸೆತದಲ್ಲಿ ಕರ‌್ರನ್‌ಗೆ ಸ್ಟ್ರೈಕ್ ಮರಳಿಸಿದರೂ, 3, 4ನೇ ಎಸೆತದಲ್ಲಿ ರನ್ ಬರಲಿಲ್ಲ. 5ನೇ ಎಸೆತದಲ್ಲಿ ಬೌಂಡರಿ ಬಂದರೂ ಭಾರತಕ್ಕೆ ಗೆಲುವು ಖಚಿತಗೊಂಡಿತು.

    ಭಾರತ: 48.2 ಓವರ್‌ಗಳಲ್ಲಿ 329 (ರೋಹಿತ್ 37, ಧವನ್ 67, ರಿಷಭ್ ಪಂತ್ 78, ಹಾರ್ದಿಕ್ 64, ಕೆಎಲ್ ರಾಹುಲ್ 7, ಕೃನಾಲ್ 25, ಶಾರ್ದೂಲ್ 30, ಮಾರ್ಕ್ ವುಡ್ 34ಕ್ಕೆ 3, ರಶೀದ್ 81ಕ್ಕೆ 2). ಇಂಗ್ಲೆಂಡ್: 9 ವಿಕೆಟ್‌ಗೆ 322 (ರಾಯ್ 14, ಬೇರ್‌ಸ್ಟೋ 1, ಸ್ಟೋಕ್ಸ್ 35, ಬಟ್ಲರ್ 15, ಲಿವಿಂಗ್‌ಸ್ಟೋನ್ 36, ಮೊಯಿನ್ ಅಲಿ 29, ಸ್ಯಾಮ್ ಕರ‌್ರನ್ 95*, ರಶೀದ್ 19, ಮಾರ್ಕ್ ವುಡ್ 14, ಶಾರ್ದೂಲ್ 67ಕ್ಕೆ 4, ಭುವನೇಶ್ವರ್ 42ಕ್ಕೆ 3).

    VIDEO | ಐಸಿಸಿ ನಿಯಮದ ದೋಷದಿಂದಾಗಿ ರಿಷಭ್ ಪಂತ್‌ಗೆ 4 ರನ್ ನಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts