ನವದೆಹಲಿ: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿರುವ ವಿಚಾರ ಇಡೀ ವಿಶ್ವಕ್ಕೆ ತಿಳಿದಿದೆ. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವ ನದೀಮ್ರನ್ನು ಕ್ರೀಡಾಲೋಕ ಕೊಂಡಾಡುತ್ತಿದ್ದು, ಅವರು ಸಾಧನೆಯ ಹಾದಿಯ ಹಿಂದಿರುವ ನೋವಿನ ಕಥೆ ಬಹತೇಕರಿಗೆ ತಿಳಿದಿಲ್ಲ.
ಒಲಿಂಪಿಕ್ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಅರ್ಷದ್ ನದೀಮ್, ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಸಾಕಷ್ಟು ಕಷ್ಟಗಳನ್ನು ಮೆಟ್ಟಿ ನಿಂತು ಈ ಮಟ್ಟಕ್ಕೆ ತಲುಪಿದ್ದಾರೆ. ನಮ್ಮ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಹುಟ್ಟಿದ್ದರೂ ತನ್ನ ಪ್ರತಿಭೆಯಿಂದ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಆದರೆ, ನದೀಮ್ನ ಸಾಧನೆ ಮೆಚ್ಚಿ ಅಲ್ಲಿನ ಸರ್ಕಾರ ಆತನನ್ನು ಪ್ರೋತ್ಸಾಹಿಸುವ ಬದಲು ಕೋಟಿಗಟ್ಟಲೇ ತೆರಿಗೆ ಕಟ್ಟುವಂತೆ ಸೂಚಿಸಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಅರ್ಷದ್ ನದೀಮ್ ಅವರು 1997, ಜನವರಿ 2ರಂದು ಪಾಕಿಸ್ತಾನದ ಪಂಜಾಬ್ ಪ್ರದೇಶದ ಖಾನೇವಾಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ನದೀಮ್ ತನ್ನ ಹೆತ್ತವರ ಏಳು ಮಕ್ಕಳಲ್ಲಿ ಮೂರನೆಯವನು. ತಂದೆ ಮೊಹಮ್ಮದ್ ಅಶ್ರಫ್ ಕೂಲಿ ಕಾರ್ಮಿಕ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಅಶ್ರಫ್ ತನ್ನ ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಹೀಗಿದ್ದರೂ ದೊಡ್ಡ ಸಂಸಾರ ನಡೆಸುವುದು ಕಷ್ಟವಾಗಿತ್ತು. ಕೆಲವೊಮ್ಮೆ ತಿನ್ನುವುದಕ್ಕೂ ತೊಂದರೆಯಾಗುತ್ತಿತ್ತು. ಅವರು ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತಿದ್ದರು. ಕಡು ಬಡತನದಲ್ಲೂ ಅರ್ಷದ್ ನದೀಮ್ಗೆ ಜಾವೆಲಿನ್ ಎಸೆತದ ಮೇಲೆ ಆಸಕ್ತಿ ಹುಟ್ಟಿಕೊಂಡಿತು. ನಿಧಾನವಾಗಿ ಅದರಲ್ಲಿ ತರಬೇತಿಯನ್ನೂ ಪಡೆದರು. ಆದರೆ, ಬಡತನದ ಕಾರಣ ಅರ್ಷದ್ ನದೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣ ಹೊಂದಿರಲಿಲ್ಲ. ಈತನ ಪ್ರತಿಭೆಯನ್ನು ಗುರುತಿಸಿದ ಗ್ರಾಮಸ್ಥರೇ ನದೀಮನನ್ನು ಬೇರೆಡೆ ಸ್ಪರ್ಧೆಗಳಿಗೆ ಕಳುಹಿಸಿದ್ದರು. ಅವರ ನಂಬಿಕೆಯನ್ನು ಉಳಿಸಿಕೊಂಡು, ಅರ್ಷದ್ ನದೀಮ್ ಹಂತ ಹಂತವಾಗಿ ಬೆಳೆದರು.
ಇದನ್ನೂ ಓದಿ: ಜಿಮ್, ಮಸಾಜ್, ಜಾಗಿಂಗ್; 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಅಮನ್!
ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಕಿಸ್ತಾನದಿಂದ ಏಳು ಕ್ರೀಡಾಪಟುಗಳು ಮಾತ್ರ ಬಂದಿದ್ದರು. ಅವರಲ್ಲಿ ಅರ್ಷದ್ ನದೀಮ್ ಕೂಡ ಒಬ್ಬರು. ಆದಾಗ್ಯೂ, ಸುಮಾರು 32 ವರ್ಷಗಳ ನಂತರ ಅವರು ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ವೈಯಕ್ತಿಕ ವಿಭಾಗದಲ್ಲಿ ಪಾಕಿಸ್ತಾನದ ಮೊದಲ ಚಿನ್ನದ ಪದಕವಾಗಿದೆ. ಅದಕ್ಕೂ ಮುನ್ನ 2023ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ನದೀಮ್ನ ಸಾಧನೆ ಕಂಡು ಅನೇಕರು ನದೀಮ್ಗೆ ಧನಸಹಾಯ ಮಾಡಿದ್ದು, ಇದರ ಮೇಲೆ ಸರ್ಕಾರದ ಕರಿನೆರಳು ಬಿದ್ದಿದೆ. ಸುಮಾರು 3 ರಿಂದ 6 ಕೋಟಿ ರೂ. ತೆರಿಗೆ ಪಾವತಿಸುವಂತೆ ನದೀಮ್ಗೆ ಸೂಚಿಸುವ ಮೂಲಕ ಶಾಕ್ ಕೊಟ್ಟಿದೆ.
ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮಗಳು ಹೇಳುವ ಪ್ರಕಾರ, ಆಟಗಾರರರು ಬಹುಮಾನದ ಹಣ ಅಥವಾ ಲಾಟರಿ ಗೆದ್ದಾಗ ಅದರಲ್ಲಿ ಬಂದ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆ ದರವು ಫೈಲ್ ಮಾಡುವವರು ಮತ್ತು ಮಾಡದವರಿಗೆ ಭಿನ್ನವಾಗಿರುತ್ತದೆ. ಅರ್ಷದ್ ನದೀಮ್ ಈವರೆಗೂ 20 ಕೋಟಿ ರೂ. ಬಹುಮಾನ ಮೊತ್ತವನ್ನು ಸ್ವೀಕರಿಸಿದ್ದು, ಅರ್ಷದ್ ಈ ಮೊತ್ತಕ್ಕೆ ತೆರಿಗೆಯನ್ನು ಪಾವತಿಸಬೇಕಿದೆ. ಫೈಲರ್‌ಗಳು ಮತ್ತು ನಾನ್‌ಫೈಲರ್‌ಗಳಿಗೆ ತೆರಿಗೆ ದರ ವಿಭಿನ್ನವಾಗಿದೆ. ಫೈಲರ್‌ಗಳು ಒಟ್ಟು ಮೊತ್ತದ ಶೇಕಡಾ 15 ರಷ್ಟು ಪಾವತಿಸಬೇಕಾಗುತ್ತದೆ, ಆದರೆ ಫೈಲ್ ಮಾಡದವರು ಸ್ವೀಕರಿಸಿರುವ ಮೊತ್ತದ ಶೇಕಡಾ 30 ರಷ್ಟು ಪಾವತಿಸಬೇಕಾಗುತ್ತದೆ. ಅರ್ಷದ್ ತೆರಿಗೆ ಸಲ್ಲಿಸುವವರಾಗಿದ್ದರೆ, ಅವರು ಬಹುಮಾನದ ಮೊತ್ತದಲ್ಲಿ 3 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಇಲ್ಲವಾದಲ್ಲಿ 6 ಕೋಟಿ ರೂ. ಮೊತ್ತ ಪಾವತಿಸಬೇಕಾಗುತ್ತದೆ.
ಪಾಕಿಸ್ತಾನದ ಚಿನ್ನದ ಹುಡುಗ ಅರ್ಷದ್ ನದೀಮ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ 10 ಕೋಟಿ ರೂ., ಸಿಂಧ್ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್ ಫೆಡರೇಶನ್ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್ ಗವರ್ನರ್ ಕಮ್ರಾನ್ ತೆಸ್ಸೋರಿ, ಕ್ರಿಕೆಟಿಗ ಅಹ್ಮದ್ ಶೆಹಜಾದ್ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದಾರೆ. ARYನ ಸಲ್ಮಾನ್ ಇಕ್ಬಾಲ್ ಅವರು ಒಲಿಂಪಿಯನ್ ಅರ್ಷದ್ ನದೀಮ್ ಅವರ ಐತಿಹಾಸಿಕ ವಿಜಯಕ್ಕಾಗಿ ARY ಲಗುನಾದಲ್ಲಿ ಅಪಾರ್ಟ್ಮೆಂಟ್ ನೀಡುವುದಾಗಿ ಘೋಷಿಸಿದ್ದಾರೆ. ಸದಾ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದಕರ ದಾಳಿ ಹಾಗೂ ಬಡತನದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಂದು ಚಿನ್ನದ ಪದಕ ನೀಡುವ ಮೂಲಕ ಅರ್ಷದ್ ನದೀಮ್ ಹೀರೋ ಆಗಿದ್ದಾರೆ.