

ಧಾರವಾಡ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾದ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಯೋಜನೆ 'ಶಕ್ತಿ' ಇಂದು ಜಾರಿಗೆ ಬಂದಿದೆ. ರಾಜ್ಯದ ವಿವಿಧೆಡೆಗಳಲ್ಲಿ ಮಹಿಳೆಯರು ಬಸ್ ಏರಿ ಉಚಿತ ಪ್ರಯಾಣವನ್ನು ಸಂಭ್ರಮಿಸಿದ್ದಾರೆ.
ಧಾರವಾಡದಲ್ಲೂ ವೃದ್ಧೆಯೊಬ್ಬರು ಈ ಯೋಜನೆಯ ಪ್ರಯೋಜನ ಪಡೆದಿದ್ದು, ಅವರು ಬಸ್ ಏರಿದ ಪರಿ ಗಮನ ಸೆಳೆದಿದೆ. ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ನಿಂಗವ್ವ ಸಂಗಾಡಿ ಎಂಬಾಕೆ ಧಾರವಾಡದಲ್ಲಿ ಬಸ್ಗೆ ತಲೆ ಬಾಗಿ ನಮಿಸಿ ಪ್ರವೇಶ ಮಾಡಿದ್ದಾರೆ. ಅವರು ಹೀಗೆ ಬಸ್ಸನ್ನೇರಿದ ಫೋಟೋ ವೈರಲ್ ಆಗಿದ್ದು, ಮೆಚ್ಚುಗೆಗೂ ಪಾತ್ರವಾಗುತ್ತಿದೆ.
ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದಿದ್ದ ಇವರು ಅಲ್ಲಿಂದ ಮೊಮ್ಮಗನ ಗೃಹಪ್ರವೇಶಕ್ಕಾಗಿ ಸವದತ್ತಿಗೆ ಹೊರಟಿದ್ದರು. ಧಾರವಾಡಕ್ಕೆ ಬಂದಾಗ ಶಕ್ತಿ ಯೋಜನೆಯ ಉದ್ಘಾಟನೆಗಾಗಿ ಶೃಂಗಾರಗೊಂಡಿದ್ದ ಬಸ್ ಸಿಕ್ಕಿತ್ತು. ಇದೇ ಬಸ್ಗೆ ಹೊರಟ ಅಜ್ಜಿ ಬಸ್ನ ಮೆಟ್ಟಿಲುಗಳಿಗ ತಲೆಬಾಗಿ ನಮಸ್ಕರಿಸಿ ಪ್ರವೇಶ ಮಾಡಿದ್ದರು. ಬಸ್ ಹೊರಡುವಾಗಲೂ 'ಉಧೋ ಉಧೋ' ಎಂದು ಜಯಘೋಷ ಕೂಗಿ ನಿಂಗವ್ವ ಸಂಭ್ರಮಿಸಿದ್ದಾರೆ.