ಓಲಾ ಕಂಪನಿಯ 1,400 ನೌಕರರು ಕೆಲಸದಿಂದ ವಜಾ

Ola Layoff
Published on

ನವದೆಹಲಿ: ಓಲಾ ಸಂಸ್ಥೆಯು 1,400 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿರುವುದಾಗಿ ತಿಳಿಸಿದೆ. ಇದಕ್ಕೆ, ಕರೊನಾ ಪಸರಿಸುವಿಕೆ ತಡೆಗಟ್ಟಲು ಹೇರಲಾದ ಲಾಕ್‌ಡೌನ್‌ನಿಂದಾಗಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಕಾರಣ ನೀಡಿದೆ.

ಕಳೆದ ಎರಡು ತಿಂಗಳಿನಿಂದ ಕಂಪನಿಯ ಆದಾಯ ಶೇ. 95ರಷ್ಟು ಇಳಿದಿದೆ. ಸದ್ಯದ ಮಟ್ಟಿಗೆ ಕರೊನಾ ತೊಲಗುವ ಲಕ್ಷಣಗಳಿಲ್ಲ. ಜನರು ಸಾಮಾನ್ಯ ಬದುಕಿಗೆ ಮರಳುವುದಕ್ಕೆ ಇನ್ನೂ ಕೆಲ ತಿಂಗಳು ಬೇಕಾಗುತ್ತದೆ. ಹಾಗಾಗಿ ನಾವು ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಭವೀಶ್ ಅಗರ್‌ವಾಲ್ ತಿಳಿಸಿದ್ದಾರೆ.

ವಜಾಗೊಂಡ ಸಿಬ್ಬಂದಿಗೆ ಮೂರು ತಿಂಗಳ ಸಂಬಳ ನೀಡಲಾಗುವುದು. ಅವರ ಆರೋಗ್ಯ ವಿಮೆ, ಅಪಘಾತ ವಿಮೆ ಮತ್ತು ಅವರ ಕುಟುಂಬದವರಿಗೆ ಮಾಡಲಾಗಿರುವ ಆರೋಗ್ಯ ವಿಮೆಯನ್ನು ಡಿಸೆಂಬರ್ 31ರವರೆಗೆ ಮುಂದುವರಿಸಲಾಗುವುದು ಎಂದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವ ಡ್ರೈವರ್‌ಗಳಿಗೆ ಒಂದು ಲಕ್ಷ ಕೆಜಿಗೂ ಹೆಚ್ಚಿನ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ. 500ಕ್ಕೂ ಹೆಚ್ಚು ಡ್ರೈವರ್‌ಗಳಿಗೆ ವೈದ್ಯಕೀಯ ತುರ್ತಿನಲ್ಲಿ ನೆರವು ನೀಡಲಾಗಿದೆ. 2 ಲಕ್ಷ ಸಿಬ್ಬಂದಿಗೆ ಶೂನ್ಯ ಬಡ್ಡಿದರದ ಸಾಲವನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net