| ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ದಿಢೀರ್ ತೈಲ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ಸಿಡಿದೆದ್ದಿದೆ. ಹೆಚ್ಚಳವಾಗಿರುವ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಬೀದಿಗಿಳಿದಿರುವ ಕೇಸರಿ ಬ್ರಿಗೇಡ್ ಸೋಮವಾರ ಸರ್ಕಾರಕ್ಕೆ ಚಳವಳಿ ಮೂಲಕ ಚಾಟಿ ಬೀಸಿತು.
ರಾಜ್ಯದಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ಜನರು ಈಗಷ್ಟೇ ಬರದ ಬವಣೆಯಿಂದ ಹೊರಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲವು ವಸ್ತುಗಳ ಬೆಲೆ ಏರಿಕೆಯಿಂದ ತೃಪ್ತವಾಗದ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಹೆಚ್ಚಿಸಿ ಜನರ ಮೇಲೆ ಪ್ರಹಾರ ಮಾಡಿದೆ ಎಂದು ಬಿಜೆಪಿ ಕಿಡಿಕಾರಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಜನ ವಿರೋಧಿ ನಿರ್ಧಾರವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಬೆಂಗಳೂರು ಸೇರಿದಂತೆ ಒಟ್ಟಾರೆ 34 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು. ಪ್ರತಿಧ್ವನಿಸಿದ ಧಿಕ್ಕಾರ: ಎತ್ತಿನಗಾಡಿ, ಟಾಂಗಾಗಳಲ್ಲಿ ಆಗಮಿಸಿದ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಣಕು ಶವಯಾತ್ರೆ ಕೂಡ ನಡೆಸಿದರು.
ಮುತ್ತಿಗೆ ಯತ್ನ ಪ್ರತಿಭಟನಾ ಸಮಾವೇಶದ ಬಳಿಕ ಬಿಜೆಪಿ ನಾಯಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಎತ್ತಿನ ಗಾಡಿ, ಟಾಂಗಾದಲ್ಲಿ ಹೊರಟರು. ಅಷ್ಟರಲ್ಲಾಗಲೇ ಪೊಲೀಸರು ಸಾಕಷ್ಟು ಕಾರ್ಯಕರ್ತರನ್ನು ವಾಹನಗಳಲ್ಲಿ ತುಂಬಿಸಿದ್ದರು. ಮುತ್ತಿಗೆ ಯತ್ನಕ್ಕೆ ತಡೆಯೊಡ್ಡಲು ಮುಂದಾದಾಗ ತಳ್ಳಾಟ, ನೂಕಾಟವೂ ನಡೆಯಿತು. ಎತ್ತಿನಬಂಡಿಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಲು ಬಿಡಿ ಎಂದು ವಿಪಕ್ಷ ನಾಯಕ ಅಶೋಕ್ ಪಟ್ಟು ಹಿಡಿದು ಪೊಲೀಸ್ ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದರು. ಬಳಿಕ ಪೊಲೀಸರು ಸಾಂಕೇತಿಕವಾಗಿ ಎತ್ತಿನಬಂಡಿಯಲ್ಲಿ ಮುಂದೆ ಹೋಗಲು ಅವಕಾಶ ಕೊಟ್ಟರು. ಹೋರಾಟದಲ್ಲಿ ಭಾಗಿಯಾದ ಎಲ್ಲ ನಾಯಕರು, ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದ ಪೊಲೀಸರು, ಬಳಿಕ ಬಿಡುಗಡೆ ಮಾಡಿದರು.
ಕಿಚ್ಚು ಒಂದೇ, ರೂಪ ಹಲವು ತೈಲ ಬೆಲೆ ಹೆಚ್ಚಳದ ವಿರುದ್ಧ ಸೊಲ್ಲೆತ್ತಿ ಹೋರಾಟದ ಕಿಚ್ಚು, ಕೆಚ್ಚು ಪ್ರದರ್ಶಿಸಿದ ಕಮಲಪಡೆ, ಹಲವು ರೂಪಗಳಲ್ಲಿ ಪ್ರತಿಭಟನೆ ನಡೆಸಿ ಜನಾಕ್ರೋಶದ ಸಂದೇಶ ರವಾನಿಸಿತು. ಎತ್ತಿನಗಾಡಿ, ಟಾಂಗಾಗಳನ್ನು ಏರಿ, ಕುದುರೆ ಸವಾರಿ ಮಾಡಿ, ಕಾರುಗಳನ್ನು ತಳ್ಳಿ, ದ್ವಿಚಕ್ರ ವಾಹನಗಳಿಗೆ ಹಗ್ಗ ಕಟ್ಟಿ ಎಳೆದು, ಅಣಕು ಶವಯಾತ್ರೆ, ಜೇಬಿಗೆ ಕತ್ತರಿ ಹಾಕುವ ಜತೆಗೆ ವಿವಿಧ ಘೋಷಣೆಗಳ ಫಲಕ ಪ್ರದರ್ಶಿಸಿ ರೋಷಾವೇಶ ಪ್ರಕಟಿಸಿತು. ಕೈಯ್ಯಲ್ಲಿ ಚೆಂಬು, ಚಿಪು್ಪ ಹಿಡಿದು, ಹಣೆಗೆ ನಾಮಹಾಕಿಕೊಂಡು, ಕಿವಿಗೆ ಹೂಮುಡಿದುಕೊಂಡ ಪ್ರತಿಭಟನಾಕಾರರು, ಕಾಂಗ್ರೆಸ್ಗೆ ತಿರುಗು ಬಾಣಬಿಟ್ಟರು.
ಇಂದು ಕೂಡ ಪ್ರತಿಭಟನೆ: ಬಿಜೆಪಿ ಸಂಘಟನಾತ್ಮಕವಾಗಿ 39 ಜಿಲ್ಲೆಗಳನ್ನು ರಚಿಸಿಕೊಂಡಿದೆ. ಈ ಪೈಕಿ 34 ಜಿಲ್ಲೆಗಳಲ್ಲಿ ಸೋಮವಾರ ಹೋರಾಟ ನಡೆದಿದೆ. ಚಾಮರಾಜನಗರ, ಮೈಸೂರು, ಕೊಡಗು ಸೇರಿ ಐದು ಜಿಲ್ಲೆಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಯಲಿದೆ. ಬಕ್ರಿದ್ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅನುಮತಿ ಪಡೆದು, ಹೋರಾಟವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತೆಂದು ಮೂಲಗಳು ತಿಳಿಸಿವೆ.
ತೀವ್ರತೆ, ವ್ಯಾಪಕತೆಗೆ ಕಸರತ್ತು: ತೈಲಾಕ್ರೋಶಕ್ಕೆ ಸಿಟ್ಟಾಗಿರುವ ಜನರ ವಿಶ್ವಾಸಗಳಿಸಿ ಹೋರಾಟ ತೀವ್ರಗೊಳಿಸಲು ಬಿಜೆಪಿ ತೀರ್ವನಿಸಿದೆ. ಜತೆಗೆ ಮಿತ್ರಪಕ್ಷ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಹಂತದಲ್ಲಿ ಗಂಭೀರ ಹೋರಾಟ ನಡೆಸುವ ತೀರ್ವನಕ್ಕೆ ಬಂದಿದೆ.
2 ಆಯಾಮದ ತಂತ್ರಗಾರಿಕೆ: ಸರ್ಕಾರ ಮಾತಿಗೆ ಬಗ್ಗುವುದಿಲ್ಲ ಎಂಬ ಸತ್ಯ ಕಂಡುಕೊಂಡಿರುವ ಬಿಜೆಪಿ ನಿರಂತರ ಹೋರಾಟದ ಮೂಲಕ ಬೆಲೆ ಏರಿಕೆ ಹಿಂಪಡೆಯಲು ಒತ್ತಡ ತರುವುದಕ್ಕೆ ನಿರ್ಧರಿಸಿದೆ. ಇನ್ನು ಸರ್ಕಾರ ತನ್ನ ನಿಲುವಿಗೆ ಅಂಟಿಕೊಂಡರೆ ಜನ ವಿರೋಧಿ ಅಭಿಪ್ರಾಯ ರೂಪಿಸುವ ಎರಡು ವಿಭಿನ್ನ ತಂತ್ರಗಾರಿಕೆ ಹಣೆದಿದೆ. ಜನರ ನೆನಪಿನ ಶಕ್ತಿ ಅಲ್ಪವೆಂಬುದನ್ನು ಅರಿತಿರುವ ಕಮಲಪಡೆ ನಾಯಕರು, ದೀರ್ಘಾವಧಿಯಲ್ಲಿ ಬೆಲೆ ಏರಿಕೆ ಹೇಗೆಲ್ಲ ಹೊರೆಯಾಗಿದೆ ಎಂದು ಪದೇ ಪದೆ ಸಾರಲು ಯೋಚಿಸಿದ್ದಾರೆ. ‘ಬೆಲೆಗಳ ಏರಿಕೆ ಗ್ಯಾರಂಟಿ, ಜನರ ಬದುಕಿಗೆ ದುಬಾರಿ’ ಎಂದು ಬಿಂಬಿಸಿ ಸರ್ಕಾರದ ವಿರುದ್ಧ ಜನರ ಅಭಿಪ್ರಾಯ ಗಟ್ಟಿಗೊಳಿಸಲು ಚಿಂತನೆ ನಡೆಸಿದ್ದಾರೆ.
ಬಿಜೆಪಿಗೆ ಹೊಸ ಅಸ್ತ್ರ: ಮುಂಬರುವ ಮೂರು ವಿಧಾನಸಭೆ, ಒಂದು ವಿಧಾನ ಪರಿಷತ್ ಕ್ಷೇತ್ರಗಳ ಉಪಚುನಾವಣೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ‘ಬೆಲೆ ಏರಿಕೆ ಅಸ್ತ್ರ’ವಾಗಲಿದೆ ಎಂದು ಬಿಜೆಪಿ ನಂಬಿದೆ. ಗ್ಯಾರಂಟಿ ಯೋಜನೆಗಳು ಪರೋಕ್ಷವಾಗಿ ತಂದಿಟ್ಟ ಸಮಸ್ಯೆಗಳಿಗೆ ಜನರು ಬೇಸತ್ತಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಜನರ ನಾಡಿಬಡಿತ ಬಿಂಬಿತವಾಗಿರುವುದು ಬಿಜೆಪಿಗೆ ಉತ್ತೇಜನ ನೀಡಿದೆ.
ಬಿಜೆಪಿಗೆ ಹೊಸ ಚುನಾವಣೆ ಅಸ್ತ್ರ: ಮುಂಬರುವ ಮೂರು ವಿಧಾನಸಭೆ, ಒಂದು ವಿಧಾನ ಪರಿಷತ್ ಕ್ಷೇತ್ರಗಳ ಉಪಚುನಾವಣೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ‘ಬೆಲೆ ಏರಿಕೆ ಅಸ್ತ್ರ’ವಾಗಲಿದೆ ಎಂದು ಬಿಜೆಪಿ ನಂಬಿದೆ. ಗ್ಯಾರಂಟಿ ಯೋಜನೆಗಳು ಪರೋಕ್ಷವಾಗಿ ತಂದಿಟ್ಟ ಸಮಸ್ಯೆಗಳಿಗೆ ಜನರು ಬೇಸತ್ತಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಜನರ ನಾಡಿಬಡಿತ ಬಿಂಬಿತವಾಗಿರುವುದು ಬಿಜೆಪಿಗೆ ಉತ್ತೇಜನ ನೀಡಿದೆ.
ತೆರಿಗೆ ಹೆಚ್ಚಳಕ್ಕೆ ಕೇಂದ್ರವೇ ಕಾರಣ
ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವನ್ನು ಮತ್ತೊಮ್ಮೆ ಸಮರ್ಥಿಸಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನರ ಪಾಲಿನ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ಚಿಸುವ ಅಗತ್ಯವೇ ಬೀಳುತ್ತಿರಲಿಲ್ಲ ಎಂದು ಅಂಕಿಅಂಶಗಳೊಂದಿಗೆ ಸ್ಪಷ್ಟನೆ ನೀಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ. ತೈಲ ದರ ಹೆಚ್ಚಿಸಿದರು ಎಂದು ಬಿಜೆಪಿ- ಜೆಡಿಎಸ್ ಪ್ರತಿಭಟಿಸುತ್ತಿವೆ. ನಾವು ಪೆಟ್ರೋಲ್ ಮೇಲೆ ಮೂರು ರೂ., ಡೀಸೆಲ್ ಮೇಲೆ ಮೂರು ರೂ. ಏರಿಸಿದ್ದೇವೆ. ಆದರೆ ಅವರು ಪ್ರತಿಭಟನೆ ಮಾಡಬೇಕಾಗಿರುವುದು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಎಂದು ಕರೆ ನೀಡಿದರು. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ, ಕೇಂದ್ರದಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಿದ್ದರು.
ಪ್ರಧಾನಿಯಾದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತೇನೆ ಎಂದಿದ್ದರು. ಆದರೆ ಪ್ರಧಾನಿಯಾದ ಬಳಿಕ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಡವರ ಬಗ್ಗೆ, ಜನ ಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟಿಸಲಿ ಎಂದು ಸವಾಲು ಹಾಕಿದರು. ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು 3 ಸಾವಿರ ಕೋಟಿ ರೂ. ರಾಜ್ಯದ ಜನರಿಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಂಬಳ ಕೊಡಲು ದುಡ್ಡಿಲ್ಲ ಅಥವಾ ಗ್ಯಾರಂಟಿ ಯೋಜನೆಗೆ ಹಣ ಇಲ್ಲ ಎಂದು ತೈಲದ ಮೇಲಿನ ತೆರಿಗೆ ಹೆಚ್ಚಿಸಿಲ್ಲ. ಹಾಗೆಂದು ಕರ್ನಾಟಕದಲ್ಲಿ ದುಡ್ಡು ತುಂಬಿ ತುಳುಕುತ್ತಿದೆ ಅಂತಲ್ಲ. ಬೇರೆ ರಾಜ್ಯಗಳಿಗಿಂತ ತೆರಿಗೆ ಪ್ರಮಾಣ ಕಡಿಮೆ ಇತ್ತು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಲೋಕಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ನಾಯಕರನ್ನು ಭ್ರಮನಿರಸನ ಗೊಳಿಸಿದೆ. ಐದು ಗ್ಯಾರಂಟಿಗಳನ್ನು ರದ್ದು ಮಾಡಿದರೆ ಜನರು ದಂಗೆ ಎದ್ದಾರು ಎಂದು ತಿಳಿದು, ತೈಲಬೆಲೆ ಹೆಚ್ಚಳದ ಹೊರೆಯನ್ನು ಜನರ ತಲೆ ಮೇಲೆ ಹೊರಿಸಿದ್ದಾರೆ.
| ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ
ಕಾಂಗ್ರೆಸ್ನವರು ಜನರ ಜೇಬಿಗೆ ಟಕಾಟಕ್ ಕತ್ತರಿ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ನುಂಗಣ್ಣನ ಹಾಗೆ ಎಲ್ಲವನ್ನೂ ನುಂಗುತ್ತಿದ್ದಾರೆ. ಜತೆಗೆ ತೈಲ ಬೆಲೆ ಏರಿಸಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಜನರು ದಂಗೆ ಎದ್ದು ಸರ್ಕಾರವನ್ನು ಕಿತ್ತುಹಾಕಬೇಕಿದೆ.
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ರಾಯ್ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಗಾ: ವಯನಾಡ್ದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ!